ಅತ್ತಿಬೆಲೆ ಪಟಾಕಿ ದುರಂತ: ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ
ಅತ್ತಿಬೆಲೆ ಪಟಾಕಿ ದುರಂತ- ಸಂಗ್ರಹ ಚಿತ್ರ
ಬೆಂಗಳೂರು, ಅ.17: ಬೆಂಗಳೂರಿನ ಆನೇಕಲ್ ಸಮೀಪದ ಅತ್ತಿಬೆಲೆ ಗಡಿಯಲ್ಲಿ ಬಾಲಾಜಿ ಟ್ರೇಡರ್ಸ್ ಪಟಾಕಿ ದಾಸ್ತಾನಿನಲ್ಲಿ ಅ.7ರಂದು ನಡೆದ ಅಗ್ನಿ ಅವಘಡದಲ್ಲಿ 14 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ಮತ್ತು ಬಾಲಾಜಿ ಟ್ರೇಡರ್ಸ್, ಪಟಾಕಿ ದಾಸ್ತಾನು ಮಳಿಗೆಗೆ ಸ್ಪೋಟಕ ಕಾಯ್ದೆ-1884ರ ಸೆಕ್ಷನ್ 6ಬಿ ರನ್ವಯ ಸ್ಥಳ ತನಿಖೆ ನಡೆಸಿ, ಸೂಕ್ತ ದಾಖಲಾತಿಗಳನ್ನು ಪಡೆದು ನಿಯಮಾನುಸಾರ ಪರಿಶೀಲಿಸಿ ಪರವಾನಗಿ ನೀಡಲಾಗಿದೆಯೆ ಎಂಬುದನ್ನು ಪರಿಶೀಲಿಸುವಂತೆ ವಿಚಾರಣಾಧಿಕಾರಿಗೆ ಸೂಚಿಸಲಾಗಿದೆ.
ಅಲ್ಲದೆ, ಈ ಪರವಾನಗಿ ನೀಡುವಿಕೆಯಲ್ಲಿ ಲೋಪ ಉಂಟಾಗಿದ್ದಲ್ಲಿ, ಉಂಟಾಗಿರಬಹುದಾದ ಲೋಪಗಳ ಕುರಿತು, ಈ ಲೋಪಕ್ಕೆ ಕಾರಣರಾದವರ ಬಗ್ಗೆ, ಈ ಪಟಾಕಿ ಅಗ್ನಿ ಅವಘಡವು ಆಕಸ್ಮಿಕವಾಗಿ ಉಂಟಾಗಿದೆಯೇ ಅಥವಾ ನಿರ್ಲಕ್ಷತೆಯಿಂದ ಉಂಟಾಗಿದೆಯೇ ಎಂಬ ಬಗ್ಗೆ ಮತ್ತು ಈ ಅಗ್ನಿ ಅವಘಡದಲ್ಲಿ ಉಂಟಾದ ನಷ್ಟದ ಕುರಿತಾದ ಅಂಶಗಳನ್ನೂ ಒಳಗೊಂಡಂತೆ ಸಮಗ್ರವಾಗಿ ವಿಚಾರಣೆ ನಡೆಸುವಂತೆ ಸರಕಾರ ಆದೇಶಿಸಿದೆ.
ವಿಚಾರಣಾಧಿಕಾರಿಯು ಈ ಆದೇಶ ಹೊರಡಿಸಿದ ದಿನಾಂಕದಿಂದ 3 ತಿಂಗಳೊಳಗಾಗಿ ವಿಚಾರಣೆ ಮುಗಿಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸರಕಾರ ಸೂಚಿಸಿದೆ.