ಅತ್ತಿಬೆಲೆ ಪಟಾಕಿ ದುರಂತ | ತಹಶೀಲ್ದಾರ್ ಸೇರಿ ಮೂವರು ಅಧಿಕಾರಿಗಳ ಅಮಾನತಿಗೆ ಸಿಎಂ ಸೂಚನೆ
ಬೆಂಗಳೂರು, ಅ. 10: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ಸಂಬಂಧ ಪರವಾನಗಿ ನೀಡುವ ವಿಚಾರದಲ್ಲಿ ಲೋಪವೆಸಗಿರುವ ಆರೋಪದಡಿ ತಹಶೀಲ್ದಾರ್, ಇನ್ಸ್ ಪೆಕ್ಟರ್ ಸೇರಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಮಾಹಿತಿ ಪಡೆದ ಅವರು, ನಿಗದಿ ಮಾನದಂಡ ಪೂರೈಸದಿದ್ದರೂ, ತಪಾಸಣಾ ವರದಿ ನೀಡಿ ಶಿಫಾರಸ್ಸು ಮಾಡಿದ ಅತ್ತಿಬೆಲೆ ಠಾಣೆಯ ಇನ್ಸ್‍ಪೆಕ್ಟರ್, ತಹಶೀಲ್ದಾರ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚನೆ ನೀಡಿದರು.
ಸಭೆಯಲ್ಲಿ ಪ್ರಸ್ತಾಪಿಸಿದ ಹಿರಿಯ ಅಧಿಕಾರಿಗಳು, ‘ಅತ್ತಿಬೆಲೆ ಪಟಾಕಿ ದುರಂತವಾದ ಮಳಿಗೆಗೆ ಸಂಬಂಧಿಸಿದಂತೆ ಆ ವ್ಯಾಪ್ತಿ ಠಾಣೆಯ ಇನ್ಸ್‍ಪೆಕ್ಟರ್ ಛಾಯಾಚಿತ್ರಗಳೊಂದಿಗೆ ಚಕ್ಕುಬಂದಿ ನಿಗದಿ ಮಾಡಿ ವರದಿ ಸಲ್ಲಿಸಿದ್ದಾರೆ. ಆನಂತರ ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಪರವಾನಗಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಹಸಿಲ್ದಾರರಿಂದಲೂ ವರದಿ ಪಡೆದಿದ್ದಾರೆ ಎಂದು ವಿವರಿಸಿದರು.
ಆಗ ಸಿದ್ದರಾಮಯ್ಯ, ಎಕ್ಸ್ ಪ್ಲೋಸಿವ್ ಆಕ್ಟ್ ನಲ್ಲಿ ಲೈಸೆನ್ಸ್ ಕೊಡುವಾಗ ನೀವು ಎಚ್ಚರಿಕೆ ವಹಿಸಬೇಕು. ಹದಿನಾಲ್ಕು ಜನರ ಜೀವಕ್ಕೆ ಯಾರು ಹೊಣೆಗಾರರು. ಕಾಯ್ದೆ ಓದಿದ್ದೀರಾ? ಅವರು ಅದರಲ್ಲಿರುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಿದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಅಲ್ಲದೆ, ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಬೇಕು. ಮುಂದೆ ಲೈಸನ್ಸ್ ನೀಡುವಾಗ ಜಿಲ್ಲಾಧಿಕಾರಿಗಳು, ಪೆÇಲೀಸ್ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ ಅವರು, ರಾಜ್ಯದೆಲ್ಲೆಡೆ, ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋದಾಮುಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ, ಡಾ.ಶಿವಶಂಕರ್ ಸೇರಿದಂತೆ ಪ್ರಮುಖರಿದ್ದರು.