ಬೆಂಗಳೂರಲ್ಲಿ ಕೃಷಿ ವಿ.ವಿ.ಸ್ಥಾಪಿಸಲು ಮುಂದಾದ ಆಸ್ಟ್ರೇಲಿಯಾದ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯ
ಬೆಂಗಳೂರು: ಆಸ್ಟ್ರೇಲಿಯಾದ ವೆಸ್ಟ್ ಸಿಡ್ನಿ ವಿಶ್ವ ವಿದ್ಯಾಲಯವು ಭಾರತದಲ್ಲಿ ಕೃಷಿ ವಿವಿ ಸ್ಥಾಪಿಸಲು ಉತ್ಸುಕವಾಗಿದ್ದು ಬೆಂಗಳೂರು ನಗರದಲ್ಲಿ ಆರಂಭಿಸಲು ಉದ್ದೇಶಿಸಿದೆ ಎಂದು ಆಸ್ಟ್ರೇಲಿಯಾದ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಕುಲಪತಿ ಜಾರ್ಜ್ ವಿಲಿಯಮ್ಸ್ ಹೇಳಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ರಾಜ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಆಸ್ಟ್ರೇಲಿಯಾದ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಅಧಿಕಾರಿಗಳ ನಿಯೋಗವು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚಿಸಿ ಬಳಿಕ ಅವರು ಮಾತನಾಡಿದರು.
ಕೃಷಿಯಲ್ಲಿ ನೀರು ನಿರ್ವಹಣೆ, ತಾಂತ್ರಿಕತೆ ಅಳವಡಿಕೆ, ಆಹಾರ ಸಂಸ್ಕರಣೆ ಮುಂತಾದ ಮುಖ್ಯ ವಿಷಯಗಳನ್ನು ಈ ಕೃಷಿ ವಿಶ್ವವಿದ್ಯಾಲಯದಲ್ಲಿ ಆದ್ಯತೆ ನೀಡಲಾಗುತ್ತದೆ. ಸ್ವತಂತ್ರವಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದು ಅಥವಾ ಕರ್ನಾಟಕದಲ್ಲಿನ ವಿಶ್ವವಿದ್ಯಾಲಯಗಳ ಸಹಯೋಗದಲ್ಲೂ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿದೆ ಎಂದು ಜಾರ್ಜ್ ವಿಲಿಯಮ್ಸ್ ವಿವರಿಸಿದರು.
ವಿದ್ಯಾರ್ಥಿ ವೇತನ ನೀಡುವ ಉದ್ದೇಶವಿದೆ. ಈಗಾಗಲೇ ವಿಯೆಟ್ನಾಂ, ಇಂಡೋನೇಷಿಯಾದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ಆರಂಭಿಸಿದೆ. ಯು.ಎ.ಇ. ಯಲ್ಲಿ ಸ್ಥಾಪನೆಗೆ ಮಾತುಕತೆ ನಡೆದಿದೆ. ಹಾಗಾಗಿ ಕರ್ನಾಟಕದಲ್ಲೂ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಉತ್ಸುಕವಾಗಿದ್ದು, ನಮಗೆ 30 ಸಾವಿರ ಅಡಿ ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ಜಾರ್ಜ್ ವಿಲಿಯಮ್ಸ್ ಮನವಿ ಮಾಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ‘ನಮ್ಮ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಕೃಷಿಗೆ ಸಂಬಂಧಪಟ್ಟಂತಹ ಹೊಸ ಅವಿಷ್ಕಾರದ ವಿಷಯಗಳನ್ನು ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳ ಪರಸ್ಪರ ಕಲಿಕಾ ವಿನಿಮಯ ಕಾರ್ಯಕ್ರಮ ತರಬೇತಿ ಹಾಗೂ ಉಪನ್ಯಾಸಕರ ವಿನಿಮಯದ ಮೂಲಕ ಶೈಕ್ಷಣಿಕವಾಗಿ ಹೆಚ್ಚು ಪರಿಣಾಮ ಬೀರಲಿದೆ’ ಎಂದು ಸಲಹೆ ನೀಡಿದರು.
ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೃಷಿಗೆ ಸಂಬಂಧಪಟ್ಟ ಆಹಾರ ಸಂಸ್ಕರಣೆ, ಕೃಷಿಗೆ ಸಂಬಂಧಪಟ್ಟ ಉದ್ಯಮ, ತಾಂತ್ರಿಕರಣ ಬಳಕೆ ಸೇರಿದಂತೆ ಪ್ರಯೋಗಾಲಯಗಳನ್ನು ಸ್ಥಾಪಿಸುವಲ್ಲಿ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಹೊರತಾಗಿಯೂ ಧಾರವಾಡ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೂ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಚಿಂತಿಸಬೇಕು. ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಶೇ.50ರಷ್ಟು ಅವಕಾಶ ನೀಡಬೇಕು ಎಂದು ಡಾ.ಶಾಲಿನಿ ರಜನೀಶ್ ಹೇಳಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು.