ಆಯುಷ್ಮಾನ್ ಯೋಜನೆಗೆ ಪ್ರಸ್ತುತ ಶೇ.75ರಷ್ಟು ಹಣವನ್ನು ರಾಜ್ಯ ಸರಕಾರವೇ ಭರಿಸುತ್ತಿದೆ : ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು : ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಾ ವೆಚ್ಚಗಳನ್ನು ಪರಿಷ್ಕರಿಸಿದರೆ ಯೋಜನೆಯ ಶೇ.90ರಷ್ಟು ಅನುದಾನವನ್ನು ರಾಜ್ಯ ಸರಕಾರವೇ ಭರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನ ಸಭೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ಮಾತನಾಡಿದ ಸಚಿವರು, ಕೇಂದ್ರದ ನೀತಿಗಳ ಪ್ರಕಾರ ಆಯುಷ್ಮಾನ್ ಭಾರತ್ ಯೋಜನೆಗೆ ಕೇಂದ್ರ ಸರ್ಕಾರ ಶೇ.60ರಷ್ಟು ಹಾಗೂ ರಾಜ್ಯ ಸರಕಾರ ಶೇ.40 ರಷ್ಟು ಅನುದಾನವನ್ನು ಒದಗಿಸಬೇಕು. ಆದರೆ ಕರ್ನಾಟಕದಲ್ಲಿ ಪ್ರಸ್ತುತ ಆಯುಷ್ಮಾನ್ ಭಾರತ್ ಯೋಜನೆಗೆ ರಾಜ್ಯ ಸರಕಾರವೇ ಶೇ.75ರಷ್ಟು ಹಣಕಾಸಿನ ನೆರವನ್ನು ಒದಗಿಸುತ್ತಿದೆ ಎಂದರು.
ಕೇಂದ್ರ ಸರಕಾರ ಕೇವಲ ಶೇ.25ರಷ್ಟು ಅನುದಾನ ನೀಡುತ್ತಿದೆ. ಇನ್ನು ಯೋಜನೆಯಡಿ ಚಿಕಿತ್ಸಾ ವೆಚ್ಚಗಳು 2018ರಿಂದ ಪರಿಷ್ಕರಣೆ ಆಗಿಲ್ಲ. ಪರಿಷ್ಕರಣೆಗೆ ಮುಂದಾದರೆ ಯೋಜನೆಗೆ ರಾಜ್ಯ ಸರಕಾರವೇ ಶೇ.90ರಷ್ಟು ಅನುದಾನ ಭರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೇಂದ್ರ ಸರಕಾರದ ಅನುದಾನದ ಪಾಲು ಶೇ.10ಕ್ಕೆ ಬಂದು ನಿಲ್ಲಲಿದೆ ಎಂದು ವಿವರಿಸಿದರು.
70 ವರ್ಷ ಮೇಲ್ಪಟ್ಟವರಿಗೆ ʼವಯೋ ವಂದನʼ ಯೋಜನೆ ಅನುಷ್ಠಾನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯೋಜನೆ ಅನುಷ್ಠಾನಕ್ಕೆ 68 ಕೋಟಿ ಅಗತ್ಯತೆ ಇದ್ದು, ಶೇ.60ರಷ್ಟು ಹಣಕಾಸನ್ನು ಕೇಂದ್ರ ಸರಕಾರ ಭರಿಸಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಅನುದಾನ ಹಂಚಿಕೆ ಬಗ್ಗೆ ರಾಜ್ಯ ಸ್ಪಷ್ಟನೆ ಕೇಳಿದೆ. ಆದರೆ ಇಲ್ಲಿಯವರೆಗೂ ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ಪಾಲುದಾರಿಕೆ ಬಗ್ಗೆ ಉತ್ತರಿಸಿಲ್ಲ. ಆದರೆ ಈಗಾಗಲೇ ರಾಜ್ಯ ಸರಕಾರ 1 ಕೋಟಿ 12 ಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನ ಒದಗಿಸಿಕೊಟ್ಟಿದೆ. ಆದರೆ ಇದರಲ್ಲಿ ಕೇಂದ್ರ ಸರಕಾರ 68 ಲಕ್ಷ ಜನರಿನ್ನು ಮಾತ್ರ ಆಯುಷ್ಮಾನ್ ಭಾರತ್ ಯೋಜನೆಯಡಿ ಪರಿಗಣಿಸುತ್ತಿದೆ ಎಂದರು.
ರಾಜ್ಯ ಸರಕಾರ 1 ಕೋಟಿ 12 ಲಕ್ಷ ಜನರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಿರುವುದರಿಂದ ಬಹುತೇಕ 70 ವರ್ಷ ಮೇಲ್ಪಟ್ಟವರು ಯೋಜನೆಯ ಅಡಿ ಫಲಾನುಭವಿಗಳಾಗಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ಸ್ಪಷ್ಟಪಡಿಸಿದರು. ಅಲ್ಲದೇ ಎಪಿಎಲ್ ಕಾರ್ಡ್ ಹೊಂದಿದವರಿಗೂ ರಾಜ್ಯ ಸರಕಾರ ಯೋಜನೆಯಡಿ ಶೇ.30ರಷ್ಟು ಚಿಕಿತ್ಸಾ ವೆಚ್ಚಗಳನ್ನು ಭರಿಸುತ್ತಿದೆ. ಪ್ರತ್ಯೇಕವಾಗಿ 70 ವರ್ಷ ಮೇಲ್ಪಟ್ಟವರಿಗೆ ವಯೋ ವಂದನ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರದ ಅನುದಾನದ ಕುರಿತು ಸ್ಪಷ್ಟನೆ ಬಂದ ಬಳಿಕ ಜಾರಿಗೆ ತರಲಾಗುವುದು ಎಂದರು.
ಆಯುಷ್ಮಾನ್ ಭಾರತ್ ಯೋಜನೆ ವಿಚಾರದಲ್ಲಿ ನೈಜವಾಗಿ ಹೆಚ್ಚಿನ ಅನುದಾನ ರಾಜ್ಯ ಸರಕಾರ ಒದಗಿಸುತ್ತಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ನಾಯಕರು ಕೇಂದ್ರ ಬಿಜೆಪಿ ಸರಕಾರದ ಮೇಲೆ ಒತ್ತಡ ತಂದು ಚಿಕಿತ್ಸಾ ವೆಚ್ಚಗಳ ಪರಿಷ್ಕರಣೆಗೆ ಒತ್ತಾಯಿಸಬೇಕು. ರಾಜ್ಯ ಸರಕಾರದಿಂದ ಈ ಪ್ರಯತ್ನ ನಡೆಯುತ್ತಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.