ಮೌನ ವಹಿಸಿರುವುದು ನನ್ನ ದೌರ್ಬಲ್ಯವಲ್ಲ: ಭಿನ್ನಮತೀಯ ಬಿಜೆಪಿ ನಾಯಕರಿಗೆ ಬಿ.ವೈ. ವಿಜಯೇಂದ್ರ ಎಚ್ಚರಿಕೆ
"ಯಡಿಯೂರಪ್ಪ ವಿರುದ್ಧದ ನಿಂದನೆಗಳನ್ನು ಸಹಿಸಲು ಅಸಾಧ್ಯ"

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಯಡಿಯೂರಪ್ಪ. ಅವರ ವಿರುದ್ಧ ಅತ್ಯಂತ ಕೀಳುಮಟ್ಟದಲ್ಲಿ ನಿಂದನೆ ಮಾಡುತ್ತಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ನಾನು ಮೌನ ವಹಿಸಿದ್ದೇನೆ ಎಂದರೆ ಅದು ನನ್ನ ದೌರ್ಬಲ್ಯವಲ್ಲ. ಸೂಕ್ತ ಸಂದರ್ಭದಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಭಿನ್ನಮತೀಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಪಮಾನಗಳನ್ನು ಸಹಿಸಿಕೊಳ್ಳಲು ಸಿದ್ಧನಿದ್ದೇನೆ. ಆದರೆ, ಯಡಿಯೂರಪ್ಪ ವಿರುದ್ಧದ ನಿಂದನೆಗಳನ್ನು ಸಹಿಸಲು ಅಸಾಧ್ಯ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದೇನೆ. ಯಾರೂ ಏನೇನು ಮಾತನಾಡುತ್ತಿದ್ದಾರೆ ಎಂಬುದನ್ನೆಲ್ಲ ಗಮನಿಸುತ್ತಿದ್ದೇನೆ ಎಂದು ಹೇಳಿದರು.
ಕೆಲವು ನಾಯಕರ ವರ್ತನೆಯಿಂದಾಗಿ ನಡೆಯುತ್ತಿರುವ ಬೆಳವಣಿಗೆಗಳಿಂದ ನಮ್ಮ ಪಕ್ಷದ ಕಾರ್ಯಕರ್ತರು ತಲೆ ಎತ್ತಿಕೊಂಡು ತಿರುಗಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪನವರ ತೇಜೋವಧೆ ನಡೆಯುತ್ತಿದ್ದರೂ ಅದಕ್ಕೆ ಅಂಕುಶ ಹಾಕುವ ಕೆಲಸವನ್ನು ಹಿರಿಯ ನಾಯಕರು ಮಾಡಬೇಕಿತ್ತು. ಆದರೆ, ಅಂತಹ ಪ್ರಯತ್ನ ಆಗಿಲ್ಲ ಎಂಬ ನೋವು ನನಗಿದೆ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಶಮನಕ್ಕೆ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದೆಲ್ಲ ನಡೆಯಬೇಕಾದರೆ ಮೊದಲು ಭಿನ್ನಮತೀಯರಾಗಿ ಗುರುತಿಸಿಕೊಂಡಿರುವವರು ತಮ್ಮ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ಗೂ ಯಾವುದೇ ಸಂಬಂಧವಿಲ್ಲ. ರಾಜ್ಯ ಸರಕಾರದ ಜೊತೆ ನಾವು ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಂಡಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣಗಳ ವಿಚಾರದಲ್ಲಿ ಸರಕಾರದ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ಹಾದಿ ಬೀದಿಯಲ್ಲಿ ನಮ್ಮ ವಿರುದ್ಧ ಹೇಳಿಕೆಗಳನ್ನು ನೀಡುವವರು ಆಗ ಎಲ್ಲಿಗೆ ಹೋಗಿದ್ದರು ಎಂದು ವಿಜಯೇಂದ್ರ ಪ್ರಶ್ನಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಬಗ್ಗೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನಡೆದ ಬಳಿಕ ಆ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತೇನೆ. ಫೆ.20ರೊಳಗೆ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ನನಗೆ ಅನುಭವನದ ಕೊರತೆಯಿದೆ ಎಂದು ತಿಳಿಸಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತ, ಕಾರ್ಯದರ್ಶಿ, ಯುವ ಮೋರ್ಚಾ ಅಧ್ಯಕ್ಷ, ಪಕ್ಷದ ಉಪಾಧ್ಯಕ್ಷನಾಗಿ ಅನುಭವ ಪಡೆದುಕೊಂಡಿದ್ದೇನೆ ಎಂದು ಅವರು ತಿರುಗೇಟು ನೀಡಿದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28