ಬಾಬರಿ ಮಸೀದಿ ಧ್ವಂಸ ಸಂದರ್ಭದ ಹಿಂಸಾಚಾರ ಪ್ರಕರಣ: ಓರ್ವ ಆರೋಪಿಯ ಬಂಧನ
ಗಲಭೆ ಸಂದರ್ಭದ ಫೈಲ್ ಚಿತ್ರ
ಹುಬ್ಬಳ್ಳಿ: ಮೂರು ದಶಕಗಳ ಬಳಿಕ ಬಾಬರಿ ಮಸೀದಿ ಧ್ವಂಸ ನಂತರದ ಹಿಂಸಾಚಾರ ಪ್ರಕರಣಕ್ಕೆ ಮರುಜೀವ ಬಂದಿದ್ದು, ಗಲಭೆಯಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಡಿ. 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಹಿಂಸಾಚಾರ ಸಂದರ್ಭ ಮಳಿಗೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 8 ಜನರ ವಿರುದ್ಧ ಹುಬ್ಬಳ್ಳಿಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದಾಗ ಆರೋಪಿತರು ವ್ಯಕ್ತಿಗಳು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿ ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಕುರಿತು ಮಾಹಿತಿ ನೀಡಿದ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್, "ದೀರ್ಘಕಾಲ ಬಾಕಿ ಉಳಿದಿರುವ ಪ್ರಕರಣಗಳನ್ನು ಭೇದಿಸುವುದು ಪೊಲೀಸರ ನಿತ್ಯ ದಿನಚರಿ. 2006 ರಲ್ಲಿ ಈ ಪ್ರಕರಣವನ್ನು ದೀರ್ಘ ಕಾಲದಿಂದ ಬಾಕಿಯಿರುವ ಪ್ರಕರಣಗಳ ಪಟ್ಟಿಗೆ ಸೇರಿಸಲಾಗಿತ್ತು. ಕಳೆದ ಮೂರು ತಿಂಗಳಲ್ಲಿ ನಾವು ಅಂತಹ 37 ಪ್ರಕರಣಗಳನ್ನು ಭೇದಿಸಿದ್ದೇವೆ, ಅವುಗಳಲ್ಲಿ ಇದೂ ಒಂದು. ಆರೋಪಿಯನ್ನು ಈಗ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಯೋಧ್ಯೆಯಲ್ಲಿ ಬಾಬರಿ ಧ್ವಂಸದ ನಂತರ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗಳಲ್ಲಿ ಆರೋಪಿ ಭಾಗಿಯಾಗಿದ್ದನು” ಎಂದು ಹೇಳಿದ್ದಾರೆ.