ಕೇರಳದಲ್ಲಿ ಹಂದಿಗಳಿಗೆ ಆಫ್ರಿಕನ್ ಜ್ವರ ಹಿನ್ನೆಲೆ: ರಾಜ್ಯದ ಗಡಿ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ತಪಾಸಣೆ
ಚಾಮರಾಜನಗರ: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡ ಹಿನ್ನಲೆ ಕರ್ನಾಟಕ ಕೇರಳ ರಾಜ್ಯಗಳ ಗಡಿ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಬಿಗಿಗೊಳಿಸಿ ಕೇರಳದಿಂದ ಬರುವ ವಾಹನಗಳಿಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಗಡಿ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ವತಿಯಿಂದ ತಪಾಸಣೆ ಕೇಂದ್ರ ಆರಂಭಿಸಿ ರಾಜ್ಯ ಪ್ರವೇಶಿಸುವ ಪ್ರತಿಯೊಂದು ವಾಹನಗಳ ನಿಗಾ ವಹಿಸಿ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ.
ಈ ಕುರಿತು ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಮಾತನಾಡಿ, ಕೇರಳದ ಎರಡು ಜಿಲ್ಲೆಯಲ್ಲಿ ಹಂದಿ ಜ್ವರ ಕಾಣಿಸಿಕೊಂಡ ಹಿನ್ನಲೆ ಹಂದಿಗಳನ್ನು ಸಾಯಿಸಲು ಅಲ್ಲಿನ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಜೊತೆಗೆ ಸಾಗಣೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಕರ್ನಾಟಕದ ಗಡಿಯಲ್ಲಿಯೂ ಕೂಡ ತಪಾಸಣೆ ಬಿಗಿಗೊಳಿಸಿ, ಕೇರಳದಿಂದ ರಾಜ್ಯ ಪ್ರವೇಶಿಸುವ ಲಾರಿ ಸೇರಿದಂತೆ ಇನ್ನಿತರ ಹಲವು ವಾಹನಗಳನ್ನು ತಪಾಸಣೆ ನಡೆಸಿ ಔಷಧಿ ಸಿಂಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೇರಳದಲ್ಲಿ ಕಾಣಿಸಿಕೊಂಡಿರುವ ಹಂದಿಜ್ವರ ಸಂಬಂಧ ಜಿಲ್ಲೆ ಹಾಗೂ ತಾಲೂಕಿನಲ್ಲಿ ಯಾವೊಂದು ಪ್ರಕರಣವೂ ಕೂಡ ಪತ್ತೆಯಾಗಿಲ್ಲ. ಜ್ವರ ಹರಡದಂತೆ ತಡೆಗಟ್ಟಲು ಚೆಕ್ ಪೋಸ್ಟ್ ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಪಶು ಪಾಲನಾ ಇಲಾಖೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.