ರಾಜಕಾಲುವೆಗಳ ತೆರವಿಗೆ ಸಮಗ್ರ ನೀತಿ ಜಾರಿ ಮಾಡದ ಹಿನ್ನೆಲೆ: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಜು.24: ರಾಜಕಾಲುವೆಗಳ ಒತ್ತುವರಿ ಮಾಡಿರುವವರನ್ನು ತೆರವು ಮಾಡುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ನಿರ್ದೇಶನಗಳಂತೆ ಸಮಗ್ರವಾದ ನಿಯಮಗಳನ್ನು ಜಾರಿ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೆರೆ ಮತ್ತು ರಾಜಕಾಲುವೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಿಟಿಜನ್ ಆಕ್ಷನ್ ಗ್ರೂಪ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜೊತೆಗೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡುವ ಸಂದರ್ಭದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದೇ ಕೈ ಕಟ್ಟಿ ಕುಳಿತುಕೊಂಡಿದ್ದ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಅಂಶವನ್ನು ತಿಳಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಒತ್ತವರಿ ತೆರವಿಗೆ ಸಂಬಂಧಿಸಿದಂತೆ ಬಿಬಿಎಂಪಿ ಈವರೆಗೂ ಕೈಗೊಂಡಿರುವ ಕ್ರಮಗಳು ಕೇವಲ ಭಾಗಶಃ ಆಗಿವೆ. ಆದರೆ, ಸಮಗ್ರ ಯೋಜನೆಯನ್ನು ರೂಪಿಸಿಲ್ಲ ಎಂದು ಪೀಠ ತಿಳಿಸಿದೆ. ಪಾಲಿಕೆ ಅಧಿಕಾರಿಗಳು ನಿರೀಕ್ಷೆಯಂತೆ ಯಾವುದೇ ಸಮಗ್ರ ಯೋಜನೆಯನ್ನು ಜಾರಿ ಮಾಡಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸಮಗ್ರ ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವುದಕ್ಕಾಗಿ ಮುಂದಿನ ವಿಚಾರಣೆ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಿಂತ ಮೇಲಧಿಕಾರಿಗಳು ಖುದ್ದಾಗಿ ಹಾಜರಿರಬೇಕು. ವಿಚಾರಣೆಯನ್ನು ನ್ಯಾಯಪೀಠವು ಆ.1ಕ್ಕೆ ಮುಂದೂಡಿದೆ.