ಶ್ರೀರಂಗಪಟ್ಟಣ ಮಸೀದಿಯಲ್ಲಿ ಮದ್ರಸಾ ನಡೆಸುತ್ತಿರುವ ಹಿನ್ನೆಲೆ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಐತಿಹಾಸಿಕ ಜುಮ್ಮಾ ಮಸೀದಿಯು ಕೇಂದ್ರೀಯ ಸಂರಕ್ಷಿತಾ ಸ್ಮಾರಕವಾಗಿದ್ದು, ಅಲ್ಲಿ ನಡೆಸಲಾಗುತ್ತಿರುವ ಮದ್ರಸಾ ಮುಚ್ಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸಂಸ್ಕೃತಿ ಇಲಾಖೆ ಸೇರಿ ಏಳು ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೊಸ ಕಬ್ಬಾಳು ಗ್ರಾಮದ ಅಭಿಷೇಕ್ ಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಿಚಾರಣೆ ಆರಂಭವಾಗುತ್ತಿದಂತೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು, ಸಂರಕ್ಷಿತ ಸ್ಮಾರಕದಲ್ಲಿ ಮದ್ರಸಾ ಇದೆ ಎಂಬುದಕ್ಕೆ ದಾಖಲೆ ಎಲ್ಲಿದೆ? ನೀವು ನೀಡಿರುವ ಮನವಿಯಲ್ಲಿ ಮದ್ರಸಾವು ಸ್ಮಾರಕದ ಸಮೀಪ ಇದೆ ಎಂದಿದೆ. ಸ್ಮಾರಕದ ಒಳಗೆ ಇದೆ ಎಂದಿಲ್ಲ. ದೀರ್ಘಾವಧಿಯಿಂದ ಅಸ್ತಿತ್ವದಲ್ಲಿರುವ ಸ್ಮಾರಕ ಇದಾಗಿದೆ. 1951 ಅಥವಾ 1995ರ ಗೆಜೆಟ್ ನೋಟಿಫಿಕೇಶನ್ ಅನ್ನು ಸಂಗ್ರಹಿಸಿದ್ದೀರಾ? ಎಂದರು.
ಆಗ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಇದು ಗಂಭೀರ ವಿಚಾರವಾಗಿದ್ದು, ನೀವು ಆಕ್ಷೇಪಣೆ ಸಲ್ಲಿಸಿ. ಆನಂತರ ಇದನ್ನು ಪರಿಗಣಿಸುತ್ತೇವೆ. ಅನುಮತಿ ಪಡೆದು ಅದನ್ನು ನಡೆಸಲಾಗುತ್ತಿದೆಯೇ ಎಂಬುದು ನಮಗೆ ಗೊತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ದೀಕ್ಷಿತ್ ಅವರು ತಿಳಿಸಿದರು.
ಇದಕ್ಕೆ ದನಿಗೂಡಿಸಿದ ಮುಖ್ಯ ನ್ಯಾಯಮೂರ್ತಿಗಳು, ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಕೇಂದ್ರ ಸಂಸ್ಕೃತಿ ಇಲಾಖೆ, ಭಾರತೀಯ ಪುರಾತತ್ವ ಇಲಾಖೆಯ (ಎಎಸ್‍ಐ) ಮಹಾನಿರ್ದೇಶಕರು, ದಕ್ಷಿಣ ಪ್ರಾಂತ್ಯದ ಎಎಸ್‍ಐ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ವೃತ್ತದ ಎಎಸ್‍ಐ, ಶ್ರೀರಂಗಪಟ್ಟಣದ ಸಂರಕ್ಷಣಾ ಸಹಾಯಕರು, ರಾಜ್ಯ ಕಂದಾಯ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಆದೇಶಿಸಿದರು.
ಕೇಂದ್ರೀಯ ಸಂರಕ್ಷಿತ ಸ್ಮಾರಕವಾದ ಜುಮ್ಮಾ ಮಸೀದಿಯ ಒಳಗೆ ಸ್ನಾನಗೃಹ, ಅಡುಗೆ ಮನೆ ನಿರ್ಮಿಸಲಾಗಿದೆ. ಸಂಕೀರ್ಣವಾದ ಕೆತ್ತನೆಗಳಿಗೆ ಹಾನಿ ಮಾಡಲಾಗಿದೆ. ಜುಮ್ಮಾ ಮಸೀದಿಯ ಒಳಗೆ ಕಳೆದ ಎರಡು ವರ್ಷಗಳಿಂದ ಮದ್ರಸಾ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಲಾಗಿದೆ.
ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಸ್ಥಳ ಮತ್ತು ಅವಶೇಷಗಳ ಕಾಯಿದೆ ಸೆಕ್ಷನ್ 16 ಮತ್ತು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳ ಮತ್ತು ಅವಶೇಷಗಳ (ತಿದ್ದುಪಡಿ ಮತ್ತು ಸಿಂಧುತ್ವ) ನಿಯಮಗಳ ನಿಯಮ 7 ಮತ್ತು 8ರ ಉಲ್ಲಂಘನೆಯಾಗಿದೆ. ಮದ್ರಸಾ ಮುಚ್ಚುವ ಮೂಲಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೋರಲಾಗಿದೆ.