224 ಶಾಸಕರಿಗೆ ಗಂಡ ಭೇರುಂಡ ಲಾಂಛನವುಳ್ಳ ಬ್ಯಾಡ್ಜ್..!

ಬೆಂಗಳೂರು, ನ.13: ವಿಧಾನಸೌಧ ಪ್ರವೇಶ ಹಾಗೂ ಅಧಿವೇಶನ ಸಂದರ್ಭದಲ್ಲಿ ಶಾಸಕರನ್ನು ಗುರುತಿಸಲು ರಾಜ್ಯ ಲಾಂಛನ ಗಂಡಬೇರುಂಡಯುಳ್ಳ ಬ್ಯಾಡ್ಜ್ ಸಿದ್ಧಪಡಿಸಲು ವಿಧಾನಸಭೆ ಸಚಿವಾಲಯ ಮುಂದಾಗಿದೆ ಎಂದು ವರದಿಯಾಗಿದೆ.
ರಾಜ್ಯ ಲಾಂಛನವಾದ ಗಂಡಬೇರುಂಡದ ಚಿನ್ನದ ಲೇಪಿತ ಬ್ಯಾಡ್ಜ್‍ಗಳ ಸಿದ್ಧಪಡಿಸುವಂತೆ ಈಗಾಗಲೇ ವಿಧಾನಸಭೆ ಸಚಿವಾಲಯ ಆದೇಶ ಹೊರಡಿಸಿದ್ದು, ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಬೆಳಗಾವಿ ಅಧಿವೇಶನದಿಂದಲೇ 224 ಶಾಸಕರೂ ಈ ನೂತನ ಬ್ಯಾಡ್ಜ್ ಗಳನ್ನು ಧರಿಸಲಿದ್ದಾರೆ.
ಜುಲೈ ತಿಂಗಳಿನಲ್ಲಿ ನಡೆದಿದ್ದ ರಾಜ್ಯ ವಿಧಾನಸಭಾ ಬಜೆಟ್ ಮಂಡನೆಯ ಅಧಿವೇಶನದ ವೇಳೆ ಸದನದೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ ಸುಮಾರು 15 ನಿಮಿಷಗಳ ಕಾಲ ಶಾಸಕರ ಆಸನದಲ್ಲಿ ಕುಳಿತು ಸದನದ ಕಲಾಪವನ್ನು ವೀಕ್ಷಣೆ ಮಾಡಿದ್ದಾನೆ. ಆದರೆ, ಇದಕ್ಕೆ ಕಾರಣ ಸದನದ ಭದ್ರತಾ ಲೋಪವೆಂದು ಆರೋಪ ಕೇಳಿಬಂದಿತ್ತು.
ಆನಂತರ ತನಿಖೆ ನಡೆಸಿದ್ದ ಪೊಲೀಸರು ದೇವದುರ್ಗ ಶಾಸಕಿ ಕರೆಮ್ಮ ಅವರಿಗೆ ಮೀಸಲಾಗಿರುವ ಆಸನದಲ್ಲಿ ಕುಳಿತಿದ್ದ ಆರೋಪದಡಿ ವಕೀಲ ತಿಪ್ಪೇರುದ್ರಪ್ಪ ಎಂಬುವರನ್ನು ಬಂಧಿಸಿದ್ದರು. ಇನ್ನೂ, ತನಿಖೆ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ 65 ಶಾಸಕರು ಹೊಸಬರಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಪೆÇಲೀಸರು ಕೂಡ ಶಾಸಕರ ಮುಖ ಪರಿಚಯ ಇಲ್ಲದ ಕಾರಣ ಒಳಗೆ ಬಿಟ್ಟಿರುವ ಮಾಹಿತಿ ಗೊತ್ತಾಗಿತ್ತು.
ಮತ್ತೊಂದೆಡೆ, ಈ ಹಿಂದೆ ಹೊಸದಾಗಿ ಆಯ್ಕೆಯಾಗಿದ್ದ ಉತ್ತರ ಕರ್ನಾಟಕ ಭಾಗದ ಕೆಲವು ಶಾಸಕರನ್ನು ವಿಧಾನಸಭಾ ಅಧಿವೇಶನದ ಒಳಗೆ ಬಿಡದೇ ಪೆÇಲೀಸರು ಪ್ರಶ್ನೆ ಮಾಡಿದ್ದರು. ಈ ವೇಳೆ ಗಲಾಟೆಯೂ ನಡೆದಿತ್ತು. ಹೀಗಾಗಿ, ಮುಂದಿನ ಬಾರಿ ವಿಧಾನಸೌಧ ಪ್ರವೇಶ ಹಾಗೂ ಅಧಿವೇಶನಗಳಲ್ಲಿ ಯಾರಿಗೂ ತೊಂದರೆ ಉಂಟಾಗದಂತೆ 224 ಶಾಸಕರೂ ಈ ನೂತನ ಬ್ಯಾಡ್ಜ್‍ಗಳನ್ನು ನೀಡಲು ವಿಧಾನಸಭೆ ಸಚಿವಾಲಯ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.