ʼನಾರಿ ಶಕ್ತಿʼಯ ಸತ್ಯ-ಮಿಥ್ಯೆಗಳ ವರದಿ ಬಿಡುಗಡೆಗೊಳಿಸಿದ ಬಹುತ್ವ ಕರ್ನಾಟಕ
ಬೆಂಗಳೂರು: ʼಸ್ವಾತಂತ್ರ್ಯದ ಅಮೃತಮಹೋತ್ಸವʼದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ʼನಾರಿ ಶಕ್ತಿʼ ಕುರಿತು ಸತ್ಯ-ಮಿಥ್ಯೆಗಳ ವರದಿಯೊಂದನ್ನು ʼನಾವೆದ್ದು ನಿಲ್ಲದಿದ್ದರೆ -ಕರ್ನಾಟಕʼ ಇದರ ಸಹಯೋಗದೊಂದಿಗೆ ಬಹುತ್ವ ಕರ್ನಾಟಕ ಬಿಡುಗಡೆಗೊಳಿಸಿದೆ.
ಬಹುತ್ವ ಕರ್ನಾಟಕ ಬಿಡುಗಡೆಗೊಳಿಸಿದ ವರದಿಯಲ್ಲೇನಿದೆ?:
ನಾರಿ ಶಕ್ತಿ: ಈ ಸತ್ಯ ಮಿಥ್ಯೆಗಳ ವರದಿಯು, ಕಳೆದ ದಶಕದಲ್ಲಿ ಹೇಗೆ ಮಹಿಳೆಯರನ್ನು ಐದು ಪ್ರಮುಖ ಕ್ಷೇತ್ರಗಳಲ್ಲಿ, ಮಹಿಳೆಯ ವಿರುದ್ಧದ ಹಿಂಸೆ, ಮಹಿಳೆಯರ ಹಕ್ಕುಗಳು, ಘನತೆ ಮತ್ತು ಸಾಮರ್ಥ್ಯ/ಕ್ಷಮತೆ, ಆರ್ಥಿಕ ಸಬಲತೆ, ಸಾಮಾಜಿಕ ಸಬಲತೆ ಮತ್ತು ರಾಜಕೀಯ ಪ್ರಾತಿನಿಧಿಕತ್ವ, ಕಂಡಿದೆ ಎಂಬುದರತ್ತ ಗಮನ ಹರಿಸಿದೆ. ವಿಶ್ವಾಸಾರ್ಹ ಮೂಲಗಳು ಹಾಗೂ ಸರ್ಕಾರದ ದತ್ತಾಂಶಗಳನ್ನು ಸಂಗ್ರಹಿಸಿ, ನೈಜವಾಗಿ ಮಹಿಳೆಯರು ಎದುರಿಸುತ್ತಿರುವ ವಾಸ್ತವಾಂಶಗಳನ್ನು ಪರೀಕ್ಷೆ ಮಾಡುತ್ತದೆ. ಸಾರ್ವಜನಿಕರಿಗೆ ಈ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಈಗ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕ್ತ ಸರ್ಕಾರವನ್ನು ಆರಿಸಲು ಸಹಾಯ ಮಾಡುವುದು ಈ ವರದಿಯ ಉದ್ದೇಶ ಎಂದು ಬಹುತ್ವ ಕರ್ನಾಟಕ ಹೇಳಿದೆ.
ಈ ವರದಿಯು ಮಹಿಳೆಯರ ಮೇಲಿನ ಅಪರಾಧಗಳು ಹಾಗೂ ಲೈಂಗಿಕ ಹಿಂಸೆಗಳು ಹೆಚ್ಚಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಭಾರತದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸಲು ಜಾರಿಗೆ ತಂದ ಮುಖ್ಯ ಯೋಜನೆಯಾದ ನಿರ್ಭಯಾ ನಿಧಿಗೆ ಹಣಕಾಸಿನ ಕೊರತೆಯಿರುವುದನ್ನು ಎತ್ತಿ ತೋರಿಸಿದೆ.
ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ ಎಂದು ಸರಕಾರ ಹೇಳಿದ್ದರೂ ಅನೇಕ ಸಂದರ್ಭಗಳಲ್ಲಿ ಮಹಿಳೆಯರ ಮೇಲಿನ ಹಿಂಸೆಗಳನ್ನು ತಡೆಯಲು ಸರಕಾರ ವಿಫಲವಾಗಿದೆ. ಉದಾಹರಣೆಗೆ ಮಣಿಪುರದ ಹಿಂಸೆಯನ್ನು ತಿರಸ್ಕರಿಸದ್ದಲ್ಲದೆ ಅದರ ಮೂಕಪ್ರೇಕ್ಷನಾಗಿತ್ತು. ಇನ್ನೂ ಕೆಲವು ಸಂದರ್ಭಗಳಲ್ಲಿ ಮಹಿಳೆಯರ ಮೇಲಿನ ಹಿಂಸೆಗಳನ್ನು ಸರ್ಕಾರವು, ತನ್ನ ಪಕ್ಷದ ರಾಜಕಾರಣಿಗಳು ಆರೋಪಿಗಳಾಗಿದ್ದಾಗ ಅಥವಾ ದಲಿತ ಸಮುದಾಯದ ಅಥವಾ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಹಿಂಸೆ ನಡೆದಾಗ ಅದನ್ನು ನಿರ್ಲಕ್ಷಿಸಿರುವುದನ್ನು ಗುರುತಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯುಸಿಸಿ, ತ್ರಿವಳಿ ತಲಾಖ್, ಅಪರಾಧ, ಮತಾಂತರ ವಿರೋಧಿಯಂಥ ಅನೇಕ ಹೊಸ ಕಾನೂನುಗಳು, ಲಿಂಗತ್ವ ನ್ಯಾಯ ಉದ್ದೇಶದ ಬದಲಾಗಿ ರಾಜಕೀಯ ಉದ್ದೇಶವನ್ನು ಹೊಂದಿರುವಂತೆ ಮೇಲ್ನೋಟಕ್ಕೆ ಕಾಣುತ್ತವೆ. ಕೆಲವು ಕಾನೂನುಗಳು ಮಹಿಳೆಯರನ್ನು ದುರ್ಬಲಗೊಳಿಸುತ್ತಾ ಅವರ ಕರ್ತೃತ್ವವನ್ನು ಕುಂಠಿತಗೊಳಿಸುತ್ತಲೇ ಗುಂಪುಗಳು ನಡೆಸುವ ಅನೈತಿಕ ಪೋಲೀಸ್ ಗಿರಿಗೆ ಸಹಮತತೆಯನ್ನು ನೀಡುವ ಸಾಧನಗಳಾಗಿ ಬಳಸಲಾಗುತ್ತಿವೆ. ಸರ್ಕಾರ ಹೇಳುವ ʼಆರ್ಥಿಕ ಸಬಲೀಕರಣʼವೂ ತುಂಬಾ ಕೆಳಮಟ್ಟದಲ್ಲಿರುವುದನ್ನು ವರದಿಗಳು ಹೇಳುತ್ತಿವೆ. ಕಾರ್ಮಿಕ ತಂಡದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ (Female Labour Force participation (Female LFPR) ಸಂಬಂಧಿಸಿದ ದತ್ತಾಂಶಗಳ ವಿಶ್ಲೇಷಣೆಯು ಉದ್ಯೋಗ ಸೃಷ್ಟಿಸುವ ಯೋಜನೆಗಳಾದ MGNREGA, ಎನ್ ಆರ್ ಎಲ್ ಎಂ ಅಥವಾ ಆರ್ಥಿಕ ಒಳಗೊಳ್ಳುವಿಕೆಯ ಪ್ರಧಾನಮಂತ್ರಿ ಜನಧನ್ ಯೋಜನೆ ಮತ್ತು ಮುದ್ರಾದಂಥ ಯೋಜನೆಗಳು ಕೂಡ ಗ್ರಾಮೀಣ ಮತ್ತುನಗರದ ಮಹಿಳೆಯರಿಗೆ ಯಾವುದೇ ಆರ್ಥಿಕ ಶಕ್ತಿಯನ್ನು ತಂದುಕೊಟ್ಟಿರುವುದು ಕಾಣುವುದಿಲ್ಲ ಎನ್ನುತ್ತದೆ. ಮತ್ತೊಂದೆಡೆ ಆಶಾ ಕಾರ್ಯಕರ್ತೆಯರ ಶ್ರಮವನ್ನು ಅಪಮೌಲ್ಯಗೊಳಿಸಲಾಗಿದೆ. ಅವರ ಆರೈಕೆಯ ಕೆಲಸ, ಕೌಟುಂಬಿಕ ಕಾರ್ಯ ಮತ್ತು ಸ್ವಯಂಸೇವೆಯನ್ನು ಉಪೇಕ್ಷೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಿಜೆಪಿಯು ʼಮಹಿಳೆಯರ ಸಬಲೀಕರಣ ಮತ್ತು ಕಲ್ಯಾಣʼದ ಹೆಗ್ಗಳಿಕೆಗಳೆಂದು ಹೇಳುವ ಕೆಲವು ಯೋಜನೆಗಳನ್ನು ಜೆಂಡರ್/ಲಿಂಗತ್ವ ನ್ಯಾಯದ ಕಣ್ಣಿನಿಂದ ವಿಶ್ಲೇಷಿಸುತ್ತದೆ. ಪ್ರಮುಖ ಅಂಕಿಅಂಶಗಳು ಕಾಣೆಯಾಗಿವೆ. ಎಸ್ ಬಿ ಎ, ಪಿಎಂಯುವೈ, ಪಿಎಂಎಂವೈ ನಂಥ ಯೋಜನೆಗಳ ಸಫಲತೆಯನ್ನು ಸಾರುವ ಅಂಕಿಅಂಶಗಳು ಪ್ರಾಮಾಣಿಕವಾಗಿಲ್ಲದಿರುವುದು ಈ ವರದಿಯಲ್ಲಿ ಕಂಡುಬಂದಿದೆ.
ಮಹಿಳಾ ಮೀಸಲಾತಿ ಮಸೂದೆಯನ್ನು - ಅಂದರೆ ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲು ತರುತ್ತೇವೆಂದು ಹೊರಟ ಪಕ್ಷವು ಮಹಿಳಾ ರಾಜಕಾರಣಿಗಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ಪರೀಕ್ಷಿಸಿದೆ. ಮಹಿಳಾ ಮೀಸಲಾತಿ ಮಸೂದೆಯು ಭವಿಷ್ಯದಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆಯನ್ನು ಖಾತರಿಪಡಿಸಬಹುದು. ಆದರೆ ವರ್ತಮಾನದಲ್ಲಿ ಏನು ಕೊರತೆಯಾಗಿದೆ ಎಂದರೆ, ಅಂಥ ಸಮಾನ ಭಾಗವಹಿಸುವಿಕೆಗೆ ಅಗತ್ಯವಾಗಿರುವ ಸಾಂಸ್ಥಿಕ ಬದಲಾವಣೆಗೆ ಬೇಕಾದ ಯಾವುದೇ ಸಿದ್ಧತೆ ನಡೆಸದಿರುವುದು ಈ ವರದಿ ಕಂಡುಕೊಂಡಿದೆ.