ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ದಿಢೀರ್ ರಾಜೀನಾಮೆ; ಚರ್ಚೆಗೆ ಗ್ರಾಸ
ವಿಜಯನಗರ, ಜು. 15: ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ನಿ. ಹೊಸಪೇಟೆ ಇದರ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಶನಿವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿರುವ ಅವರು, ಜುಲೈ 1ರಿಂದಲೇ ಅನ್ವಯ ಆಗುವಂತೆ ರಾಜೀನಾಮೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಬಿಡಿಸಿಸಿಗೆ ರಾಜೀನಾಮೆ ನೀಡಿದ್ದು, ಇದೀಗ ರಾಜಕೀಯ ವಲಯದಲ್ಲಿ ಚರ್ಚಗೆ ಗ್ರಾಸವಾಗಿದೆ.
ಆನಂದ್ ಸಿಂಗ್ ಅವರು, ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪಟ್ಟು ಹಿಡಿದು ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಿಸಿದ್ದರು. ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತ್ತು. ವಿಜಯನಗರ ಜಿಲ್ಲೆಯಾಗಿ ರಚನೆಯಾದ ಮೇಲೆ ಇದೇ ಮೊದಲ ಬಾರಿಗೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಆನಂದ್ ಸಿಂಗ್ ತಮ್ಮ ಪುತ್ರ ಸಿದ್ಧಾರ್ಥ್ ಸಿಂಗ್ಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಸಹ ಸಫಲರಾಗಿದ್ದರು. ಆದರೆ, ಸಿದ್ಧಾರ್ಥ್ ಸೋಲು ಕಂಡಿದ್ದಾರೆ. ಇದರಿಂದ ಆನಂದ್ ಸಿಂಗ್ ಸಕ್ರಿಯ ರಾಜಕಾರಣದಿಂದಲೇ ದೂರ ಆಗಿದ್ದಾರೆ.
ಇದರ ಬೆನ್ನಲ್ಲೇ ಇದೀಗ ಆನಂದ್ ಸಿಂಗ್ ಪ್ರತಿಷ್ಠಿತ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.