ಸರಕಾರಿ ಕಚೇರಿ, ಆವರಣಗಳಲ್ಲಿ ಧೂಮಪಾನ-ತಂಬಾಕು ಸೇವನೆ ನಿಷೇಧ : ರಾಜ್ಯ ಸರಕಾರ ಆದೇಶ
ಸಾಂದರ್ಭಿಕ ಚಿತ್ರ(PTI)
ಬೆಂಗಳೂರು : ಸರಕಾರಿ ಕಚೇರಿ ಹಾಗೂ ಆವರಣಗಳಲ್ಲಿ ಧೂಮಪಾನ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿರ್ಬಂಧಿಸಿ ರಾಜ್ಯ ಸರಕಾರ ಆದೇಶಿಸಿದೆ.
ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದ್ದು, ಯಾವುದೇ ಸರಕಾರಿ ನೌಕರನು ಕಚೇರಿಗಳಲ್ಲಿ ಹಾಗೂ ಕಚೇರಿ ಆವರಣದಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಧೂಮಪಾನ ಹಾಗೂ ತಂಬಾಕಿನ ಇತರೆ ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು, ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ-31ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯ ಅಥವಾ ಮಾದಕ ವಸ್ತುವನ್ನು ಸೇವಿಸುವುದನ್ನು ಕೂಡ ನಿಷೇಧಿಸಲಾಗಿದೆ.
ಈ ಸಂಬಂಧ ಎಚ್ಚರಿಕೆಯ ಫಲಕವನ್ನು ಕಚೇರಿಯ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸತಕ್ಕದ್ದು ಎಂದು ಸೂಚಿಸಲಾಗಿದೆ. ಈ ಸೂಚನೆಗಳನ್ನು ಉಲ್ಲಂಘಿಸಿದರೆ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Next Story