ಸೇಡಿನ ಕ್ರಮವಾಗಿ ಐಐಎಂ-ಬೆಂಗಳೂರು ಪ್ರಾಧ್ಯಾಪಕರಿಗೆ ಕಿರುಕುಳದ ವಿರುದ್ಧ 887 ಶಿಕ್ಷಣ ತಜ್ಞರ ಖಂಡನೆ
PC : IIM–Bangalore
ಬೆಂಗಳೂರು: ಐಐಎಂ-ಬೆಂಗಳೂರು(ಐಐಎಂಬಿ) ಸೇಡಿನ ಕ್ರಮವಾಗಿ ಅರ್ಥಶಾಸ್ತ್ರಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪಕ ಮಲ್ಘನ್ ಅವರಿಗೆ ಕಿರುಕುಳ ನೀಡುತ್ತಿರುವುದನ್ನು ದೇವಿದೇಶಗಳ 887 ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ತಜ್ಞರು ಖಂಡಿಸಿದ್ದಾರೆ.
ಮಲ್ಘನ್ ಐಐಎಂ-ಬೆಂಗಳೂರಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ತನ್ನ ಕ್ರಿಯಾಶೀಲತೆ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಆರೋಪದಲ್ಲಿ ಶಿಸ್ತುಕ್ರಮವನ್ನು ಎದುರಿಸುತ್ತಿದ್ದಾರೆ.
ಬಹಿರಂಗ ಪತ್ರಕ್ಕೆ ಸಹಿ ಹಾಕಿರುವ 887 ಜನರು, ಕ್ಯಾಂಪಸ್ನಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಐಐಎಂಬಿಯಿಂದ ಸೇವಾ ನಿಯಮಗಳ ದುರ್ಬಳಕೆಯನ್ನು ಖಂಡಿಸಿದ್ದಾರೆ.
ಸಂಸ್ಥೆಯು ಶೈಕ್ಷಣಿಕ ಸ್ವಾತಂತ್ರ್ಯದ ಹಕ್ಕು ಅನುಷ್ಠಾನದ ತತ್ವಗಳನ್ನು ಉಲ್ಲಂಘಿಸುತ್ತಿರುವುದು ತೀವ್ರ ನಾಚಿಕೆಗೇಡು ಎಂದು ಈ ಗುಂಪು ಪತ್ರದಲ್ಲಿ ಹೇಳಿದೆ. ಈ ತತ್ವಗಳು ಶೈಕ್ಷಣಿಕ ಸ್ಯಾತಂತ್ರ್ಯವನ್ನು ರಕ್ಷಿಸಲು ಮತ್ತು ಉತ್ತೇಜಿಸಲು ವಿಶ್ವಸಂಸ್ಥೆಯು ಹೊರಡಿಸಿರುವ ಮಾರ್ಗಸೂಚಿಗಳಾಗಿವೆ.
ಮಲ್ಘನ್ ಅವರನ್ನು ಹಿಂಬಡ್ತಿಗೊಳಿಸುವ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿರುವ ಪತ್ರವು, ಅವರ ವಿರುದ್ಧದ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳುವಂತೆ ಸಂಸ್ಥೆಯನ್ನು ಆಗ್ರಹಿಸಿದೆ.
ಪತ್ರದ ಪ್ರಕಾರ ಮಲ್ಘನ್ 2008ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಐಐಎಂಬಿಗೆ ಸೇರಿದ್ದರು ಮತ್ತು ಬಳಿಕ ಸಹ ಪ್ರಾಧ್ಯಾಪಕರಾಗಿ ಪದೋನ್ನತಿ ಪಡೆದಿದ್ದರು. ಅವರು ಪ್ರೊಫೆಸರ್ ಆಗಿ ಬಡ್ತಿ ಪಡೆಯಲಿದ್ದರು, ಆದರೆ 2022ರಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಆರಂಭಿಸಿದ್ದರಿಂದ ಅದನ್ನು ತಡೆಹಿಡಿಯಲಾಗಿದೆ. ಮಾರ್ಚ್ 2024ರಲ್ಲಿ ಮಲ್ಘನ್ ಅವರಿಗೆ ಸಹಾಯಕ ಪ್ರಾಧ್ಯಾಪಕರಾಗಿ ಹಿಂಬಡ್ತಿ ನೀಡಲಾಗಿದೆ.
ಐಐಎಂಬಿಯ ಇತ್ತೀಚಿನ ಹಿಂಬಡ್ತಿಯು 2018ರಿಂದಲೂ ಅವರು ಎದುರಿಸುತ್ತಿರುವ ಸರಣಿ ಕಿರುಕುಳಗಳ ಪರಾಕಾಷ್ಠೆಯಾಗಿದೆ. ಇವು ಸ್ಪಷ್ಟವಾಗಿ ಶೈಕ್ಷಣಿಕ ಸ್ವಾತಂತ್ರ್ಯ ವಿಷಯಕ್ಕೆ ಸಂಬಂಧಿಸಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಪತ್ರಕ್ಕೆ ಪ್ರತಿಕ್ರಿಯಿಸಿರುವ ಐಐಎಂಬಿ, ತನ್ನ ಉದ್ಯೋಗಿಗಳ ನಡವಳಿಕೆಯನ್ನು ನಿಯಂತ್ರಿಸುವ ತನ್ನ ನಿಯಮಗಳನ್ನು ಬೋಧಕ ವೃಂದ ಮತ್ತು ಆಡಳಿತ ಅನುಮೋದಿಸಿವೆ. ಯಾವುದೇ ಶಿಸ್ತಿನ ವಿಧಾನವನ್ನು ಪಾರದರ್ಶಕ ಮತ್ತು ನಿಗದಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.
‘ಪತ್ರದಲ್ಲಿ ಹೇಳಲಾಗಿರುವ ಕೆಲವು ವಿಷಯಗಳನ್ನು ಸಂಸ್ಥೆಯು ಒಪ್ಪುವುದಿಲ್ಲ ಮತ್ತು ಕೆಲವು ಅಂಶಗಳು ವಿಚಾರಣಾಧೀನವಾಗಿರುವುದರಿಂದ ಊಹಾಪೋಹಗಳಿಂದ ದೂರವಿರುವಂತೆ ನಾವು ಎಲ್ಲರನ್ನು ಕೋರಿಕೊಳ್ಳುತ್ತೇವೆ. ಹೀಗಾಗಿ ಸದ್ಯಕ್ಕೆ ಸಂಸ್ಥೆಯು ಇನ್ನಷ್ಟು ಪ್ರತಿಕ್ರಿಯೆಯನ್ನು ನೀಡುವುದಿಲ್ಲ’ ಎಂದು ಅದು ಹೇಳಿದೆ.
ಮಲ್ಘನ್ ತನ್ನ ವಿರುದ್ಧದ ಶಿಸ್ತುಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಈ ವರ್ಷದ ಪೂರ್ವಾರ್ಧದಲ್ಲಿ ನ್ಯಾಯಾಲಯವು ಅವರ ವಿರುದ್ಧದ ಕ್ರಮಕ್ಕೆ ತಡೆಯಾಜ್ಞೆಯನ್ನು ನೀಡಿದೆ.