ಬೆಂಗಳೂರು | 99 ಬಾರಿ ಸಂಚಾರ ನಿಯಮ ಉಲ್ಲಂಘನೆ: ಸ್ಕೂಟರ್ ಪೊಲೀಸ್ ವಶ, ಚಾಲಕನ ಲೈಸೆನ್ಸ್ ಅಮಾನತು
ಬೆಂಗಳೂರು, ಸೆ.28: 99 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರರನನ್ನು ನಗರದ ಮೈಕೊ ಲೇಔಟ್ ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದು, ವಾಹನ ಮಾಲಕನನ್ನು ವಶಕ್ಕೆ ತೆಗೆದುಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಆತನ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಿದ್ದಾರೆ.
ʼʼಸಂಚಾರ ನಿಯಮ ಇರುವುದೇ ಉಲ್ಲಂಘನೆ ಮಾಡುವುದಕ್ಕೆ ಎಂದು ಅಂದುಕೊಂಡಂತಿರುವ ದ್ವಿಚಕ್ರ ವಾಹನ ಸವಾರ ನಗರದಲ್ಲಿ 99 ಬಾರಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಮಾಹಿತಿ ದೊರಕಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದ್ವಿಚಕ್ರವಾಹನ ಸವಾರ ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಜಂಕ್ಷನ್ ಬಳಿ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದ. ಈ ದೃಶ್ಯ ಮುಂದಿನಿಂದ ಬರುತ್ತಿದ್ದ ಕಾರಿನ ಡ್ಯಾಷ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪೊಲೀಸ್ ಆ್ಯಪ್‍ನಲ್ಲಿ ಪರಿಶೀಲಿಸಿದಾಗ ಸವಾರ 99 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.
ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು, “ಡಿಸಿಪಿ ಟ್ರಾಫಿಕ್ ಸೌತ್ ಮತ್ತು ತಂಡದಿಂದ ಒಳ್ಳೆಯ ಕೆಲಸ. ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಡಿಎಲ್ ಅನ್ನು ಅಮಾನತುಗೊಳಿಸಲಾಗಿದೆ. ಎಫ್ಐಆರ್ ದಾಖಲಿಸಲಾಗಿದೆ. ಯಾರೂ ಕಾನೂನಿಗೆ ಅತೀತರಲ್ಲ" ಎಂದು ಟ್ವೀಟ್ ಮಾಡಿದ್ದಾರೆ.