ಬೆಂಗಳೂರು | ಪತಿಯನ್ನು ಕೊಲೆಗೈದು ನಾಪತ್ತೆ ದೂರು ದಾಖಲಿಸಿದ್ದ ಪತ್ನಿಯ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.20: ಗಂಡನನ್ನು ಕೊಲೆಗೈದು ಹೊಂಡದಲ್ಲಿ ಹಾಕಿ ಬಳಿಕ ಪೊಲೀಸರಿಗೆ ಗಂಡ ಕಾಣುತ್ತಿಲ್ಲವೆಂದು ದೂರು ನೀಡಿದ್ದ ಮೃತನ ಎರಡನೇ ಪತ್ನಿ ಸೇರಿ ಇಬ್ಬರನ್ನು ಇಲ್ಲಿನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಶಕೀಲ್ ಅಖ್ತರ್ ಕೊಲೆಯಾದ ವ್ಯಕ್ತಿ. ಈತ ಮೂಲತಃ ಬಿಹಾರದವರು. ಮೃತನ ಎರಡನೇ ಪತ್ನಿ ನಝೀರ್ ಖಾತುನ್(25) ಮತ್ತು ಆಕೆಯ ಅಕ್ಕ ಕಾಶ್ಮೀರಿ(28) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿ ಶಕೀಲ್ ಅ.9ರಂದು ಮನೆಯ ಮಂಚದ ಮೇಲೆ ಮಲಗಿದ್ದರು. ಈ ವೇಳೆ, ಶಕೀಲ್ ಎದೆಯ ಮೇಲೆ ಎರಡನೇ ಪತ್ನಿ ನಝೀರ್ ಖಾತುನ್ ಕುಳಿತು, ಕತ್ತು ಹಿಸುಕಿದ್ದಾಳೆ. ಈ ವೇಳೆ ಶಕೀಲ್ ರ ಕೈ ಮತ್ತು ಕಾಲುಗಳನ್ನು ನಝೀರ್ ಖಾತುನ್ ನ ಅಕ್ಕ ಕಾಶ್ಮೀರಿ ಬಿಗಿಯಾಗಿ ಹಿಡಿದಿದ್ದಾಳೆನ್ನಲಾಗಿದೆ. ಪ್ರಾಣ ಉಳಿಸಿಕೊಳ್ಳಲು ಶಕೀಲ್ ಎಷ್ಟೇ ಪ್ರಯತ್ನಪಟ್ಟರು, ಬಿಡದ ಇಬ್ಬರು ಆರೋಪಿಗಳೂ ಆತ ಕೆಳಗೆ ಬಿದ್ದರೂ ಬಿಡದೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆನ್ನಲಾಗಿದೆ.
ಶಕೀಲ್ ಅವರನ್ನು ಹತ್ಯೆ ಮಾಡಿದ ಬಳಿಕ ಇಬ್ಬರೂ ಆರೋಪಿಗಳು ಭಾರೀ ಮಳೆ ಬಂದ ಸಮಯದಲ್ಲಿ ಬೆಡ್ ಶೀಟ್ನಲ್ಲೇ ಶವವನ್ನು ಸುತ್ತಿ ಯಾರಿಗೂ ಗೊತ್ತಾಗದ ಹಾಗೇ ಮಧ್ಯರಾತ್ರಿಯಲ್ಲಿ ಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದ ಹೊಂಡಕ್ಕೆ ಮೃತದೇಹವನ್ನು ಎಸೆದಿದ್ದಾರೆ. ಈ ಕೃತ್ಯ ಮಾಡಿದ ಎರಡು ದಿನದ ಬಳಿಕ ಆತನ ಎರಡನೇ ಪತ್ನಿ ಆರೋಪಿ ನಝೀರ್ ಖಾತುನ್ ಪತಿ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ವೇಳೆ, ಗಂಡನನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅ.15 ರಂದು ಮೃತದೇಹ ಪತ್ತೆ
ದೂರು ಬಂದ ಮೇರೆಗೆ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅ.15 ರಂದು ಹೊಂಡದಲ್ಲಿ ಕೆಟ್ಟ ವಾಸನೆ ಬರುತ್ತಿದೆ ಎಂದು ಮಾಹಿತಿ ಬಂದಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಮೃತದೇಹ ಪತ್ತೆಯಾಗಿದೆ. ಹೊಂಡದಿಂದ ಶವ ಹೊರತೆಗೆದು ತನಿಖೆ ಕೈಗೊಂಡಿದ್ದ ಪೊಲೀಸರು ಸದ್ಯ ಆರೋಪಿಗಳಾದ ನಝೀರ್ ಖಾತುನ್ ಮತ್ತು ಕಾಶ್ಮೀರಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.