ಬೆಂಗಳೂರು | ನಕಲಿ ಅಂಕಪಟ್ಟಿ ಸೃಷ್ಟಿಸಿ ಸರಕಾರಿ ಕೆಲಸ ಪಡೆಯುವ ಯತ್ನ: 48 ಮಂದಿಯ ಬಂಧನ
ಬೆಂಗಳೂರು : ನಕಲಿ ದಾಖಲಾತಿ ಸೃಷ್ಟಿಸಿ ಜಲಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಪಡೆಯಲು ಮುಂದಾಗಿದ್ದ 37 ಮಂದಿ ಅಭ್ಯರ್ಥಿಗಳು, ಮೂವರು ಸರಕಾರಿ ನೌಕರರು ಸೇರಿ ಒಟ್ಟು 48 ಮಂದಿ ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ವಿಶೇಷ ವಿಚಾರಣಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಪ್ರಕರಣ ಸಂಬಂಧ 37 ಮಂದಿ ಅಭ್ಯರ್ಥಿಗಳ ಜೊತೆಗೆ 11 ಮಂದಿ ಮಧ್ಯವರ್ತಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ಮೂವರು ಸರಕಾರಿ ನೌಕರರಾಗಿದ್ದಾರೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಆನಂದ್, ಕೃಷ್ಣ ಹಾಗೂ ಪ್ರದೀಪ್ ಬಂಧಿತ ಸರಕಾರಿ ನೌಕರರಾಗಿದ್ದು, ಆನಂದ್ ಕಲಬುರ್ಗಿ ಜಿಲ್ಲೆ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರಾದರೆ, ಕೃಷ್ಣ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಜೋಗ್ ಫಾಲ್ಸ್ ಕಚೇರಿಯಲ್ಲಿ ಎಫ್‍ಡಿಎ ಹಾಗೂ ಪ್ರದೀಪ್ ಹಾಸನದಲ್ಲಿ ಜಲಸಂಪನ್ಮೂಲ ಇಲಾಖೆಯ ಎಫ್‍ಡಿಐ ಆಗಿ ಕೆಲಸ ಮಾಡುತ್ತಿದ್ದರು. ಬಂಧಿತ ಆರೋಪಿಗಳಿಂದ ಒಟ್ಟು 17 ಮೊಬೈಲ್ ಫೋನ್, 40 ಲಕ್ಷ ರೂ. ಮೌಲ್ಯದ ಎರಡು ಕಾರು ಹಾಗೂ ಒಂದು ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
2022ರ ಅಕ್ಟೋಬರ್ ನಲ್ಲಿ ಜಲಸಂಪನ್ಮೂಲ ಇಲಾಖೆಯು ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ ಲಾಗ್ 182 ಹುದ್ದೆಗಳಿಗೆ ನೇರ ನೇಮಕಾತಿಯಡಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ನೇಮಕಾತಿಗಾಗಿ 62 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿ ಹಾಗೂ ಇತರೆ ದಾಖಲಾತಿಗಳು ಪರಿಶೀಲನೆ ವೇಳೆ ನಕಲಿ ಎಂದು ಕಂಡುಬಂದ ಹಿನ್ನೆಲೆ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಶೇಷಾದ್ರಿಪುರ ಠಾಣೆಗೆ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು.
ಪ್ರಕರಣ ಸಿಸಿಬಿ ಹಸ್ತಾಂತರವಾಗಿದ್ದರಿಂದ ತನಿಖೆ ಕೈಗೊಂಡ ಸಿಸಿಬಿ ಇನ್‍ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡವು ಕಲಬುರಗಿಯಲ್ಲಿ 25, ಹಾಸನ 12, ಬೆಳಗಾವಿ 3, ಕೋಲಾರ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ಒಟ್ಟು 12 ಜಿಲ್ಲೆಗಳಿಂದ ಅನಧಿಕೃತವಾಗಿ ಅರ್ಜಿ ಸಲ್ಲಿಸಿದ್ದ 62 ಜನರ ಪೈಕಿ 37 ಮಂದಿ ಅಭ್ಯರ್ಥಿಗಳನ್ನು ಬಂಧಿಸಿದೆ. ಅಲ್ಲದೆ, ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ವಿವರಿಸಿದ್ದಾರೆ.
ನಾಪತ್ತೆಯಾದ 25 ಅಭ್ಯರ್ಥಿಗಳಿಗೆ ಶೋಧ: ಪ್ರಕರಣದಲ್ಲಿ ಬಂಧಿತ ಅಭ್ಯರ್ಥಿಗಳೆಲ್ಲರೂ ಮಧ್ಯಮ ವರ್ಗದವರಾಗಿದ್ದು, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಅನುತ್ತೀರ್ಣರಾದವರು. ಇನ್ನೂ ಕೆಲ ಅಭ್ಯರ್ಥಿಗಳು ಕಡಿಮೆ ಅಂಕ ಪಡೆದುಕೊಂಡಿದ್ದರು. ವಾಮಮಾರ್ಗದ ಮೂಲಕ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸೃಷ್ಟಿಸುವ ಜಾಲದೊಂದಿಗೆ ಸಂಪರ್ಕ ಬೆಳೆಸಿ, ಲಕ್ಷಾಂತರ ಹಣ ನೀಡಿ ಹೆಚ್ಚು ಅಂಕ ಹೊಂದಿರುವ ರೀತಿ ಅಂಕಪಟ್ಟಿ ಪಡೆಯುತ್ತಿದ್ದರು. ಸಕ್ರಿಯವಾಗಿದ್ದ ಮಧ್ಯವರ್ತಿಗಳು ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ವಂಚಿಸಿದ್ದರು. ಸದ್ಯ 25 ಅಭ್ಯರ್ಥಿಗಳು ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.