ಪ್ರೆಸಿಡೆನ್ಸಿ ವಿವಿ ಕುಲಪತಿ ನಿಸಾರ್ ಅಹ್ಮದ್‌ರಿಗೆ ಬೆಂಗಳೂರು ನಗರ ವಿವಿ ಗೌರವ ಡಾಕ್ಟರೇಟ್ ಘೋಷಣೆ

ಬೆಂಗಳೂರು: ಪ್ರೆಸಿಡೆನ್ಸಿ ವಿವಿ ಕುಲಪತಿ ಹಾಗೂ ಪ್ರೆಸಿಡೆನ್ಸಿ ಶಿಕ್ಷಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಮಂಗಳೂರು ಮೂಲದ ನಿಸಾರ್ ಅಹ್ಮದ್ ಅವರಿಗೆ ಬೆಂಗಳೂರು ನಗರ ವಿವಿಯ 2ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಲಿಂಗರಾಜ ಗಾಂಧಿ ತಿಳಿಸಿದ್ದಾರೆ.
ಜು. 10 ರಂದು ವಿಶ್ವವಿದ್ಯಾನಿಲಯದ 'ಜ್ಞಾನಜ್ಯೋತಿ' ಸಭಾಂಗಣದಲ್ಲಿ ಘಟಿಕೋತ್ಸವ ಕಾರ್ಯಕ್ರಮ ಮಡೆಯಲಿದ್ದು, ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿಸಾರ್ ಅಹ್ಮದ್ ಅವರಿಗೆ ರಾಜ್ಯಪಾಲರೇ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ.
ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.
ಖ್ಯಾತ ಹೃದ್ರೋಗ ತಜ್ಞರು ಮತ್ತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ ಸಿ.ಎನ್. ಮಂಜುನಾಥರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ವಿವಿ ಪ್ರಕಟನೆಯಲ್ಲಿ ತಿಳಿಸಿದೆ.
ನಿಸಾರ್ ಅಹ್ಮದ್ ಅವರು 1976 ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರು. ಅವರ ಚಿಕ್ಕಪ್ಪ ಅಬ್ದುಲ್ ಹಮೀದ್ ಜೊತೆಗೆ ಅವರು ಪ್ರೆಸಿಡೆನ್ಸಿ ಶಿಕ್ಷಣ ಸಮೂಹ ಸಂಸ್ಥೆಗಳ ಸಹ-ಸ್ಥಾಪಕರಾದರು. 1980 ರಲ್ಲಿ ಅಬ್ದುಲ್ ಹಮೀದ್ ಅವರ ನಿಧನದ ಬಳಿಕ ಸಂಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯು 24 ವರ್ಷದ ಯುವಕ ನಿಸಾರ್ ಅಹ್ಮದ್ ಹೆಗಲಿಗೆ ಬಂದಿತ್ತು.
ಪ್ರೆಸಿಡೆನ್ಸಿ ಯುನಿವರ್ಸಿಟಿ ಶಿಕ್ಷಣ ಸಮೂಹ ಸಂಸ್ಥೆಗಳಲ್ಲಿ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ನೀಡಲಾಗುತ್ತಿದೆ. 16,000 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಬೆಂಗಳೂರು ಮತ್ತು ಮಂಗಳೂರಿನಲ್ಲಿ ICSE ಹಾಗೂ CBSE ಪಠ್ಯಕ್ರಮ ಬೋಧಿಸುವ ಶಾಲೆಗಳಿದ್ದು, ಹೆಬ್ಬಾಳ ಮತ್ತು ಜೆಪಿ ನಗರದಲ್ಲಿ ಎರಡು ಪದವಿ ಪೂರ್ವ ಕಾಲೇಜುಗಳಿವೆ. ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ ಪ್ರೆಸಿಡೆನ್ಸಿ ಕಾಲೇಜು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ.