ಬೆಂಗಳೂರು| ಒತ್ತುವರಿ ತೆರವು : ಸರ್ವೇ ಕಾರ್ಯಕ್ಕಾಗಿ ಭೂಮಾಪಕರ ನಿಯೋಜನೆಗೆ ಸೂಚನೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು: ಬೃಹತ್ ನೀರುಗಾಲುವೆ ಹಾಗೂ ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ಸರ್ವೇ ಕಾರ್ಯಕ್ಕಾಗಿ ಹೆಚ್ಚು ಭೂಮಾಪಕರನ್ನು ನಿಯೋಜಿಸಲು ಭೂದಾಖಲೆಗಳ ಇಲಾಖೆಗೆ ಪತ್ರ ಬರೆಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಬೃಹತ್ ನೀರುಗಾಲುವೆ ಹಾಗೂ ಕೆರೆಗಳಲ್ಲಿ ಸರ್ವೇ ಮಾಡಲು ಹೆಚ್ಚು ಭೂಮಾಪಕರ ಅವಶ್ಯಕತೆಯಿದ್ದು, ಕಂದಾಯ ಇಲಾಖೆಯ ಅಡಿ ಬರುವ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗೆ ಪತ್ರ ಬರೆದು ಹೆಚ್ಚು ಭೂಮಾಪಕರನ್ನು ನಿಯೋಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ನಗರದಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಸರ್ವೇ ನಡೆಸಿ ಮಾರ್ಕ್ ಮಾಡಿ, ತಹಶೀಲ್ದಾರ್ ರಿಂದ ಆದೇಶಗಳನ್ನು ಜಾರಿಮಾಡಿರುವಂತಹ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಬೇಕು. ಹೈಕೋರ್ಟ್ನಲ್ಲಿ ತಡೆಯಾಜ್ಞೆಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿಕೊಂಡು ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಅವರು ಹೇಳಿದರು.
ನಿಗದಿತ ಸಮಯದಲ್ಲಿ ಕೆರೆ ಹಾಗೂ ರಾಜಕಾಲುವೆ ಒತ್ತುವರಿಗಳನ್ನು ಗುರುತಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ಒತ್ತುವರಿಗಳನ್ನು ಗುರುತಿಸಿದ ನಂತರ ತಹಶೀಲ್ದಾರ್ ಒತ್ತುವರಿದಾರರಿಗೆ ಆದೇಶಗಳನ್ನು ನೀಡಿದ ಬಳಿಕ ಪಾಲಿಕೆ ಹಾಗೂ ಕಂದಾಯ ಇಲಾಖೆಯು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕು ಎಂದರು.
75 ಒತ್ತುವರಿಗಳನ್ನು ತೆರವುಗೊಳಿಸಿರುವ ವಿವರ: ನಗರದಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕ್ರಿಯೆ ಸಕ್ರಿಯವಾಗಿ ನಡೆಯುತ್ತಿದ್ದು, 15 ದಿನಗಳಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿ ಬರುವ ಎಬಿಕೆ, ಗುಂಜೂರು, ಕರಿಯಮ್ಮನ ಅಗ್ರಹಾರ, ಬೆಳ್ಳತ್ತೂರಿನಲ್ಲಿ ಹಾಗೂ ಕೆ.ಆರ್ ಪುರದ ಸರ್ವೇ ಸಂಖ್ಯೆ 69ರಲ್ಲಿ ಬರುವ 3 ಅಂತಸ್ತಿನ ಕಟ್ಟಡದಲ್ಲಿ ಬರುವ 10 ಮಳಿಗೆಗಳು ಸೇರಿದಂತೆ 62 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನು ಯಲಹಂಕ ವಲಯ ವ್ಯಾಪ್ತಿಯಲ್ಲಿ 8 ಒತ್ತುವರಿಗಳು ಹಾಗೂ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 5 ಒತ್ತುವರಿಗಳು ಸೇರಿದಂತೆ ಒತ್ತು 75 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ಬೃಹತ್ ನೀರುಗಾಲುವೆ ಒತ್ತುವರಿಗಳ ವಿವರ: ನಗರದಲ್ಲಿ ಹೊಸ ಒತ್ತುವರಿಗಳು ಸೇರಿದಂತೆ 3176 ಒತ್ತುವರಿಗಳನ್ನು ಗುರುತಿಸಲಾಗಿದ್ದು, 2322 ಒತ್ತುವರಿಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಇನ್ನು 854 ಒತ್ತುವರಿಗಳನ್ನು ತೆರವುಗೊಳಿಸಬೇಕಾಗಿದ್ದು, ಈ ಪೈಕಿ 155 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿರುತ್ತದೆ. 487 ಒತ್ತುವರಿಗಳಿಗೆ ಆದೇಶಗಳನ್ನು ಜಾರಿಗೊಳಿಸುವ ಹಂತದಲ್ಲಿದೆ. ಇನ್ನು 162 ಒತ್ತುವರಿಗಳಿಗೆ ತಹಶೀಲ್ದಾರರಿಂದ ಆದೇಶಗಳನ್ನು ಜಾರಿಗೊಳಿಸಲಾಗಿದ್ದು, ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕಿದೆ ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಕೆರೆಗಳ ಒತ್ತುವರಿಗಳ ಸರ್ವೇ ಕಾರ್ಯ ತ್ವರಿತವಾಗಿ ನಡೆಸಿ: ಪಾಲಿಕೆ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 159 ಕೆರೆಗಳಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಗುರುತಿಸಲಾಗಿದೆ. ಅದರಂತೆ 140 ಕೆರೆಗಳಲ್ಲಿ ಒತ್ತುವರಿಯಾಗಿರುವ ಬಗ್ಗೆ ತಹಶೀಲ್ದಾರರಿಗೆ ಪತ್ರಗಳನ್ನು ಬರೆಯಲಾಗಿದೆ. ಈ ಪೈಕಿ 40 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, 100 ಕೆರೆಗಳಲ್ಲಿ ಸರ್ವೇ ಕಾರ್ಯ ನಡೆಸಬೇಕಿದೆ. ಉಳಿದ ಕೆರೆಗಳಲ್ಲಿ ಸರ್ವೇಕಾರ್ಯವನ್ನು ತ್ವರಿತವಾಗಿ ನಡೆಸಲು ಸೂಚನೆ ನೀಡಿದರು.
ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಬಿಎಂಟಿಎಫ್ ಸೂಪರಿಡೆಂಟ್ ಆಫ್ ಪೊಲೀಸ್ ಡಾ. ವಿ.ಜೆ ಶೋಭಾ ರಾಣಿ, ಎಲ್ಲ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಪ್ರಧಾನ ಅಭಿಯಂತರರು, ವಲಯ ಮುಖ್ಯ ಅಭಿಯಂತರರು, ರಾಜಕಾಲುವೆ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರ್ ಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.