ಬೆಂಗಳೂರು | ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣ: ತನಿಖೆ ಚುರುಕು
ಚಿತ್ರ- ಮೃತ ದಂಪತಿ ಮತ್ತು ಮಗು
ಬೆಂಗಳೂರು, ಆ.5: ಟೆಕ್ಕಿ ಕುಟುಂಬದ ನಾಲ್ವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಡ-ಹೆಂಡತಿಯ ಮನಸ್ತಾಪ ಸಾವಿಗೆ ಕಾರಣವೆಂದು ಪ್ರಾಥಮಿಕ ಹಂತದ ತನಿಖೆಯಿಂದಾಗಿ ಗೊತ್ತಾಗಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಕಾಡುಗೋಡಿ ಪೊಲೀಸರು ತಿಳಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ವೀರಾರ್ಜುನ ವಿಜಯ್ (31), ಹೇಮಾವತಿ (29) ಹಾಗೂ ಇಬ್ಬರು ಮಕ್ಕಳಾದ ಮೋಕ್ಷಾ ಮೇಘ ನಯನಾ (3), ಸೃಷ್ಟಿ ಸುನಯನಾ(8 ತಿಂಗಳು) ಸಾವನ್ನಪ್ಪಿದವರು.
ಬೆಂಗಳೂರಿನ ಸೀಗೆಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಈ ದಂಪತಿ ಆರು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದರು. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ವಿರಾರ್ಜುನ ವಿಜಯ್ ಕುಂದಲಹಳ್ಳಿ ಬಳಿಯಿರುವ ಕಂಪೆನಿಯೊಂದರಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಈತನು ಷೇರು ವ್ಯವಹಾರದಲ್ಲಿ ತೊಡಗಿದ್ದನು ಎಂಬ ಮಾಹಿತಿ ಇದೆ ಎಂದು ಪೊಲೀಸರು ಹೇಳಿದ್ದಾರೆ.
ವೀರಾರ್ಜುನ ವಿಜಯ್ ಜು.31ರಂದು ಪತ್ನಿಯನ್ನು ಕೊಂದು, ನಂತರ ಆ.1ರಂದು ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿದ್ದನು. ಮೂರು ದಿನಗಳ ಕಾಲ ಶವಗಳೊಂದಿಗೆ ಇದ್ದು, ನಂತರದಲ್ಲಿ ಆ.2 ರಂದು ವಿರಾರ್ಜುನ ವಿಜಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಮನೆಯಿಂದ ದುವಾರ್ಸನೆ ಬಂದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೆÇಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ವರು ಸಾವನ್ನಪ್ಪಿದ ವಿಷಯ ತಿಳಿದು ಬಂದಿದೆ. ಪತ್ನಿ ಹೇಮಾವತಿ ಮತ್ತು ಇಬ್ಬರು ಮಕ್ಕಳ ಮೃತದೇಹ ರೂಮ್ವೊಂದರ ನೆಲದ ಮೇಲೆ ಬಿದ್ದಿದ್ದವು. ವೀರಾರ್ಜುನ ವಿಜಯ್ ಶವ ನೇಣು ಬಿಗಿದ ಸ್ಥಿತಿಯಲ್ಲಿತ್ತು ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.
ನಾಲ್ಕು ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಿ ಅವುಗಳನ್ನು ಆಂಧ್ರಪ್ರದೇಶಕ್ಕೆ ಕೊಂಡೊಯ್ಯಲಾಗಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಕಾಡುಗೋಡಿ ಠಾಣಾ ಪೊಲೀಸರು ತಿಳಿಸಿದ್ದಾರೆ.