ಬೆಂಗಳೂರು| ಮಾದಕ ವಸ್ತು ಮಾರಾಟ; ಓರ್ವ ವಿದೇಶಿ ಪ್ರಜೆ ಸೇರಿ ಮೂವರ ಬಂಧನ
50 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳನ್ನು ಮಾರುತ್ತಿದ್ದ ಓರ್ವ ವಿದೇಶಿ ಪ್ರಜೆ ಹಾಗೂ ಓರಿಸ್ಸಾ ಮೂಲದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ 50 ಲಕ್ಷ ರೂ. ಮೌಲ್ಯದ ಡ್ರಗ್ ವಶವಡಿಸಿಕೊಂಡಿದ್ದಾರೆ.
ಓರಿಸ್ಸಾ ಮೂಲದ ಇಬ್ಬರು ಆರೋಪಿಗಳು ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಆರೋಪಿಗಳು ಮಾರತ್ತಹಳ್ಳಿ ಮತ್ತು ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ತಳ್ಳುವ ಗಾಡಿಯಲ್ಲಿ ವಿವಿಧ ರೀತಿಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
ಈ ನಡುವೆ ಓರಿಸ್ಸಾದಿಂದ ಗಾಂಜಾ ತಂದು ಮಾರಾಟ ಮಾಡಲು ಆರಂಭಿಸಿದ್ದರು. ಈ ಬಗ್ಗೆ ಪಕ್ಕಾ ಮಾಹಿತಿ ಆಧರಿಸಿ ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ದಾಳಿ ಮಾಡಿದ್ದು, ಆರೋಪಿಯನ್ನು ಬಂಧಿಸಿ 15 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಇಬ್ಬರ ವಿರುದ್ಧ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ವಿದೇಶಿ ಪ್ರಜೆ 2005ರಲ್ಲಿ ಬ್ಯುಸಿನೆಸ್ ವಿಸಾದಿಂದ ಬೆಂಗಳೂರಿಗೆ ಬಂದಿದ್ದನು. ಪಾಸ್ಪೆಪೋರ್ಟ್ ಅವಧಿ ಮುಗಿದರೂ ಬೆಂಗಳೂರಿನಲ್ಲಿ ವಾಸವಾಗಿದ್ದನು. ಈತ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಆರಂಭಿಸಿದ್ದನು. ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, 180 ಗ್ರಾಂ ಎಮ್ಡಿಎಮ್ಎ, 58 ಗ್ರಾಂ, 150 ಎಕ್ಸಟಸಿ ಪಿಲ್ಸ್ ಜಪ್ತಿ ಮಾಡಲಾಗಿದೆ. ಈತನ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಜೊತೆಗೆ ವಿದೇಶಿಯರ ಕಾಯ್ದೆ ಅಡಿಯಲ್ಲಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.