ಬೆಂಗಳೂರು | ಕೆಐಎಡಿಬಿ ಕಚೇರಿಗಳಿಗೆ ಈಡಿ ದಾಳಿ, ದಾಖಲೆ ಪರಿಶೀಲನೆ
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ಬಹುಕೋಟಿ ಅವ್ಯವಹಾರ ವಂಚನೆ ಆರೋಪ ಸಂಬಂಧ ಬೆಂಗಳೂರು ಹಾಗೂ ಧಾರವಾಡದಲ್ಲಿರುವ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.
ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರದ ಹೆಸರಲ್ಲಿ ವಂಚನೆ, ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಲೂಟಿ, ಜೊತೆಗೆ ಐಡಿಬಿಐ ಬ್ಯಾಂಕ್ ಒಂದೇ ಶಾಖೆಯಲ್ಲಿ 24 ಖಾತೆಗಳನ್ನು ತೆರೆಯಲಾಗಿತ್ತು ಎನ್ನುವ ಗಂಭೀರ ಆರೋಪ ಸಂಬಂಧ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂ ಸ್ವಾಧೀನ ಹೆಸರಲ್ಲಿ ಅಕ್ರಮ ಹಾಗೂ ಧಾರವಾಡ ಕೆಲಗೇರಿ ಹಾಗು ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿ ಲೂಟಿ ಮಾಡಿರುವ ಆರೋಪ ಕೆಐಡಿಬಿ ಮೇಲಿದ್ದು, ಈ ಸಂಬಂಧ ಬೆಂಗಳೂರಿನ ಖನಿಜ ಭವನದಲ್ಲಿರುವ ಕಚೇರಿ ಹಾಗೂ ಧಾರವಾಡದಲ್ಲಿ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯ ಅಧಿಕಾರಿಗಳ ಹೇಳಿಕೆಗಳನ್ನು ದಾಖಲು ಮಾಡಿಕೊಂಡರು.