ಬೆಂಗಳೂರು| ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ; ದಿನಪೂರ್ತಿ ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ಸು ಕರೆತರಲು ಪೋಷಕರ ಹರಸಾಹಸ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ 44ಕ್ಕೂ ಅಧಿಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಇ-ಮೇಲ್ ನಲ್ಲಿ ಬಾಂಬ್ ದಾಳಿ ಮೂಲಕ ಕಟ್ಟಡ ಸ್ಫೋಟಿಸುವುದಾಗಿ ಬೆದರಿಕೆ ಬಂದ ಹಿನ್ನೆಲೆ ಪೋಷಕರಲ್ಲಿ ಆತಂಕ ಮನೆ ಮಾಡಿದ್ದು, ಶುಕ್ರವಾರ ದಿನಪೂರ್ತಿ ತಮ್ಮ ಮಕ್ಕಳನ್ನು ಶಾಲೆಗಳಿಂದ ಮನೆಗೆ ವಾಪಸ್ಸು ಕರೆತರಲು ಹರಸಾಹಸ ಪಟ್ಟರು.
ಎಂದಿನಂತೆ ಶಾಲೆಗಳು ಆರಂಭವಾಗುತ್ತಿದ್ದಂತೆ, ಇ-ಮೇಲ್ ಪರಿಶೀಲಿಸಿದ ಬಸವೇಶ್ವರ ನಗರದ ನ್ಯಾಷನಲ್, ವಿದ್ಯಾಶಿಲ್ಪ, ಎನ್‍ಪಿಎಸ್, ಕಾರ್ಮೆಲ್, ಹೆಬ್ಬಗೋಡಿಯ ಎಬಿನೈಜರ್ ಸೇರಿದಂತೆ 44 ಶಾಲೆಗಳ ಕಚೇರಿ ಸಿಬ್ಬಂದಿಗೆ ಬೆದರಿಕೆ ಸಂದೇಶ ಕಂಡಿದೆ. ಇದರಿಂದ ಆತಂಕಗೊಂಡ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಶಾಲೆಯಿಂದ ಹೊರ ಕಳುಹಿಸಿ ಪೋಷಕರು ಹಾಗೂ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು.
ಆನಂತರ, ಸ್ಥಳೀಯ ಪೊಲೀಸ್ ಸಿಬ್ಬಂದಿ ಸಹಾಯದೊಂದಿಗೆ ಬಾಂಬ್ ನಿಷ್ಕ್ರಿಯ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ಮತ್ತೊಂದೆಡೆ ಬಾಂಬ್ ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆ ಪೋಷಕರು ಆತಂಕ ವ್ಯಕ್ತಪಡಿಸಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅದೇ ರೀತಿ, ಆಯಾ ಠಾಣಾ ವ್ಯಾಪ್ತಿಯ ಸಿಬ್ಬಂದಿ, ಸಂಚಾರ ಪೊಲೀಸರು ಶಾಲೆಗಳ ಬಳಿ ದೌಡಾಯಿಸಿ ಮಕ್ಕಳನ್ನು ಶಾಲಾ ಕಟ್ಟಡಗಳಿಂದ ಹೊರತಂದರು. ಆತಂಕದಲ್ಲಿ ಪೋಷಕರು ಶಾಲೆಗಳ ಬಳಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಹಿನ್ನೆಲೆ ಕೆಲವಡೆ ಸಂಚಾರ ದಟ್ಟಣೆ ಸಮಸ್ಯೆಯೂ ಎದುರಾಯಿತು.
44 ಶಾಲೆಗಳು?: ಬನ್ನೇರುಘಟ್ಟ ಸಮೀಪದ ದಿನ್ನೇಪಾಳ್ಯದ ಗ್ರೀನ್ ಹುಡ್ ಹೈಸ್ಕೂಲ್, ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆ, ರಾಯನ್ ಇಂಟರ್ ನ್ಯಾಷನಲ್ ಶಾಲೆ, ಆಲ್ ಬಷೀರ್ ಶಾಲೆ, ದೀಕ್ಷಾ ಹೈಟ್ ಶಾಲೆ, ಕಾಂಡರ್ ಇಂಟರ್ ನ್ಯಾಷನಲ್ ಶಾಲೆ ಮತ್ತು ಬಿವಿಎಂ ಗ್ಲೋಬಲ್ ಶಾಲೆಗೆ ಹುಸಿ ಬಾಂಬ್ ಕರೆ ರವಾನೆಯಾದರೆ, ಹೆಬ್ಬಗೋಡಿಯ ಡಿವೈನ್ ಇಂಟರ್ ನ್ಯಾಷನಲ್ ಶಾಲೆ, ಟ್ರೀಮೈಸ್ ಇಂಟರ್ ನ್ಯಾಷನಲ್ ಶಾಲೆ, ಫ್ಲಾರೆನ್ಸ್ ಇಂಟರ್ ನ್ಯಾಷನಲ್ ಶಾಲೆ, ಎಬೆನ್ಸರ್ ಇಂಟರ್ ನ್ಯಾಷನಲ್ ಶಾಲೆ ಸೇರಿ ಸೇರಿ ಇಲ್ಲಿ ಒಟ್ಟು ನಾಲ್ಕು ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿದೆ.
ಸರ್ಜಾಪುರದ ಗ್ರೀನ್ ಹುಡ್ ಇಂಟನ್ರ್ಯಾಷನಲ್ ಹೈಸ್ಕೂಲ್, ಗ್ಲೋಬಲ್ ಇಂಡಿಯನ್ ಇಂಟನ್ರ್ಯಾಷನಲ್ ಶಾಲೆ, ಓಕರಿಡ್ಜ್ ಶಾಲೆ, ಟಿಐಎಸ್‍ಬಿ ಶಾಲೆ, ಇನ್ವೆಂಚರ್ ಅಕಾಡೆಮಿ, ಜಿಗಣಿಯ ಅಚೀವರ್ಸ್ ಅಕಾಡೆಮಿ ಮತ್ತು ಎನ್ಡೆವರ್ಸ್ ಅಕಾಡೆಮಿ ಶಾಲೆಗೆ ಹುಸಿ ಬಾಂಬ್ ಕರೆ ಬಂದಿದೆ.ಹಾಗೇ, ಆನೇಕಲ್ ತಾಲೂಕಿನ 18 ಶಾಲೆ ಸೇರಿ ಒಟ್ಟು 44 ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪರಿಶೀಲನೆ: ನಗರದಲ್ಲಿ ಬಾಂಬ್ ಬೆದರಿಕೆ ಸುದ್ದಿ ಹಬ್ಬುತ್ತಿದ್ದಂತೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಲ್ಲಿನ ಸದಾಶಿವನಗರದ ನ್ಯೂ ಅಕಾಡೆಮಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದು ಸ್ಥಳೀಯರಿಗೆ ಧೈರ್ಯ ತುಂಬಿದರು.
ಕಳೆದ ವರ್ಷ ಎಪ್ರಿಲ್‍ನಲ್ಲಿಯೂ ಬೆಂಗಳೂರು ನಗರ ಸೇರಿದಂತೆ 6 ಖಾಸಗಿ ಶಾಲೆಗಳಲ್ಲಿ ಏಕಕಾಲದಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಬಳಿಕ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂಬುದು ದೃಢಪಟ್ಟಿತ್ತು.
ಬೆದರಿಕೆ ಬೆನ್ನಲ್ಲೇ ಪೋಷಕರು ಶಾಲೆಗಳತ್ತ ಧಾವಿಸಿ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸರು ಖಾಸಗಿ ಶಾಲೆಗಳಿಗೆ ಬೇರೆ ಬೇರೆ ಇ-ಮೇಲ್ ಐಡಿ ಮೂಲಕ ಆರೋಪಿ ಮೇಲ್ ಕಳಿಸಿದ್ದಾನೆ. ಆದರೆ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ. ಬಾಂಬ್ ಬೆದರಿಕೆ ಬಗ್ಗೆ ಪೋಷಕರು ಆತಂಕಪಡುವ ಅಗತ್ಯವಿಲ್ಲ ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
ಇ ಮೇಲ್‍ನಲ್ಲಿ ಏನಿದೆ?: ‘ಶುಕ್ರವಾರ ಬೆಳಗ್ಗೆ 6:30ಕ್ಕೆ ವಿದ್ಯಾಶಿಲ್ಪ ಅಕಾಡೆಮಿ ಶಾಲೆಗೆ KHarijites@beeble.comನಿಂದ ಈ ಮೇಲ್ ಬಂದಿದೆ. ಇದರಲ್ಲಿ ಮುಝಾಹಿದ್ದಿನ್ ಎಂದೂ ಉಲ್ಲೇಖಿಸಿ ‘ನೀವು ಇಸ್ಲಾಂ ಮತಕ್ಕೆ ಸೇರಬೇಕು, ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ. ನೀವೆಲ್ಲ ಅಲ್ಲಾಹುವಿನ ವಿರೋಧಿಗಳು, ಸಾಯಲು ಸಿದ್ಧರಾಗಿರಿ ಎಂದೆಲ್ಲಾ ಇದರಲ್ಲಿ ಉಲ್ಲೇಖಿಸಲಾಗಿದೆ’ ಎಂದು ವರದಿಯಾಗಿದೆ.
ಶನಿವಾರ ಶಾಲೆಗಳಿಗೆ ರಜೆ ಇಲ್ಲ:ಜಿಲ್ಲಾಧಿಕಾರಿ
ಶಾಲೆಗಳಿಗೆ ಬಾಂಬ್ ಬೆದರಿಕೆ ಹಿನ್ನೆಲೆ ತಪಾಸಣೆ ದೃಷ್ಟಿಯಿಂದ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ, ಡಿ.2(ಶನಿವಾರ) ಎಂದಿನಂತೆ ಬೆಂಗಳೂರಿನ ಶಾಲಾ-ಕಾಲೇಜು ನಡೆಯುತ್ತವೆ.
- ಬಿ.ದಯಾನಂದ್, ಬೆಂಗಳೂರು ನಗರ ಜಿಲ್ಲಾಧಿಕಾರಿ
ಗಂಭೀರ ಪ್ರಕರಣ, ಬಂಧಿಸುತ್ತೇವೆ: ‘ಬೆದರಿಕೆ ಕರೆ ಬಂದಿರುವ ಎಲ್ಲ ಕಡೆ ಸಿಐಡಿ ಹಾಗೂ ಇತರೆ ದಳದ ಸಿಬ್ಬಂದಿ ಕಳುಹಿಸಿ ತಪಾಸಣೆ ನಡೆಸಲಾಗುತ್ತದೆ. ಕಟ್ಟೆಚ್ಚರ ವಹಿಸುವಂತೆ ಸಚಿವರು ನಿರ್ದೇಶಿಸಿದ್ದಾರೆ. ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಈ ಪ್ರಕರಣವನ್ನೂ ನಾವು ಗಂಭೀರವಾಗಿ ಪರಿಗಣಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸುತ್ತೇವೆ’
-ದಯಾನಂದ, ಆಯುಕ್ತ, ನಗರ ಪೊಲೀಸ್
ಕಠಿಣ ಕ್ರಮ ಕೈಗೊಳ್ಳುತ್ತೇವೆ: ‘ನಗರದಲ್ಲಿ ಬಾಂಬ್ ಬೆದರಿಕೆಯಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು ಮತ್ತು ಮಕ್ಕಳು ಆತಂಕಪಡುವುದು ಬೇಡ’
-ಡಾ.ಜಿ.ಪರಮೇಶ್ವರ್, ಗೃಹ ಸಚಿವ