ಬೆಂಗಳೂರು | ಆನೇಕಲ್ ಬಳಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಅವಘಡ ಪ್ರಕರಣ: ಸಾವಿನ ಸಂಖ್ಯೆ 12ಕ್ಕೆ ಏರಿಕೆ
ಬೆಂಗಳೂರು, ಅ.7: ರಾಜಧಾನಿ ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನ ಬಳಿ ಬೃಹತ್ ಪ್ರಮಾಣದಲ್ಲಿ ಪಟಾಕಿಗಳನ್ನು ಲಾರಿಯಿಂದ ಇಳಿಸುವಾಗ ಆಕಸ್ಮಿಕ ಬೆಂಕಿ ತಗುಲಿ ಸ್ಫೋಟ ಸಂಭವಿಸಿದ ಪರಿಣಾಮ 12 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ವರದಿಯಾಗಿದೆ.
ಶನಿವಾರ ಸಂಜೆ ಸುಮಾರಿಗೆ ಇಲ್ಲಿನ ಅತ್ತಿಬೆಲೆ ಮುಖ್ಯ ರಸ್ತೆಯಲ್ಲಿರುವ ರಾಮಸ್ವಾಮಿ ರೆಡ್ಡಿ ಎಂಬುವರಿಗೆ ಸೇರಿದ ಪಟಾಕಿ ಗೋದಾಮಿಗೆ ಲಾರಿಯಿಂದ ಪಟಾಕಿಗಳನ್ನು ಕೆಳಗೆ ಇಳಿಸಲಾಗುತಿತ್ತು. ಈ ವೇಳೆ ಆಕಸ್ಮಿಕ ಬೆಂಕಿ ತಗುಲಿ ಕ್ಷಣಮಾತ್ರದಲ್ಲಿ ಅವಘಡ ಸಂಭವಿಸಿದೆ. ಇನ್ನೂ, 24 ಕಾರ್ಮಿಕರ ಪೈಕಿ 12 ಮಂದಿ ಸಾವನ್ನಪ್ಪಿದ್ದಾರೆ. ಹಲವರಿಗೆ ಸಣ್ಣಪುಟ್ಟಗಾಯಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.
ಘಟನೆಯಲ್ಲಿ ಗೋದಾಮಿನ ಪಕ್ಕದಲ್ಲಿದ್ದ ನವೀನ್ ಎಂಬುವರಿಗೆ ಸೇರಿದ ಪಟಾಕಿ ಮಳಿಗೆಯೂ ಬೆಂಕಿಗೆ ಹೊತ್ತಿ ಉರಿದಿದೆ. ಅಲ್ಲದೆ ಅಕ್ಕಪಕ್ಕದ ಇತರೆ ನಾಲ್ಕೈದು ಅಂಗಡಿಗಳು ಬೆಂಕಿಗಾಹುತಿಗಿವೆ. ಈ ಕುರಿತು ಮಾಹಿತಿ ಪಡೆದ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗುವುದರೊಂದಿಗೆ 1 ಕ್ಯಾಂಟ್ರೋ, 2 ಬೊಲೆರೋ, 4 ಬೈಕ್ಗಳು ಸಹ ಸುಟ್ಟು ಕರುಕಲಾಗಿವೆ.
ಈ ಕುರಿತು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರತಿಕ್ರಿಯಿಸಿ, ಬಾಲಾಜಿ ಕ್ರಾಕರ್ಸ್ ಮಳಿಗೆಯಲ್ಲಿ ಪಟಾಕಿಗಳನ್ನು ಲಾರಿಯಿಂದ ಕೆಳಗೆ ಇಳಿಸುವಾಗ ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಗೋದಾಮಿ ಮತ್ತು ಮಳಿಗೆಗೂ ಬೆಂಕಿ ವ್ಯಾಪಿಸಿ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಮೇಲ್ನೋಟಕ್ಕೆ ಗೊತ್ತಾಗಿದೆ ಎಂದರು.
ಘಟನೆ ಕುರಿತು ಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಕಾರ್ಯಾಚರಣೆ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿದೆ. ಮಳಿಗೆಯ ಮಾಲಕ ನವೀನ್ಗೂ ಸುಟ್ಟ ಗಾಯಗಳಾಗಿವೆ. ಪರಿಶೀಲನೆಗಾಗಿ ಎಫ್ಎಸ್ಎಲ್ ತಂಡ ಆಗಮಿಸಿದ್ದು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಸಂಚಾರ ದಟ್ಟಣೆ..!
ವಾಹನ ಸವಾರರಿಗೆ ಪಟಾಕಿ ಅಂಗಡಿ ದುರಂತ ಬಿಸಿ ತಟ್ಟಿದ್ದು, ಶನಿವಾರ ಸಂಜೆ ಅತ್ತಿಬೆಲೆ ಕಡೆ ತೆರಳುವ ಮಾರ್ಗದಲ್ಲಿ ಸಾಲು ಸಾಲಾಗಿ ವಾಹನಗಳು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಗೋದಾಮು ರಾಮಸ್ವಾಮಿ ರೆಡ್ಡಿ ಎಂಬುವವರಿಗೆ ಸೇರಿದ್ದಾಗಿದ್ದು, ಅನುಮತಿ ಪಡೆದುಕೊಳ್ಳಲಾಗಿತ್ತು. ಆದರೆ ಎಲ್ಲಾ ನಿಯಮ ಪಾಲನೆ ಮಾಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ಘಟನೆಯಲ್ಲಿ ಮಳಿಗೆಯ ಮಾಲಕ ನವೀನ್ಗೂ ಸುಟ್ಟ ಗಾಯಗಳಾಗಿವೆ. ಬೆಂಕಿ ಹೊತ್ತಿಕೊಂಡ ಬಗ್ಗೆ ಖಚಿತ ಮಾಹಿತಿ ಇಲ್ಲ. ಪರಿಶೀಲನೆಗಾಗಿ ಎಫ್ಎಸ್ಎಲ್ ತಂಡ ಆಗಮಿಸಲಿದೆ. ಮಳಿಗೆ ಪರವಾನಗಿ ಬಗ್ಗೆಯು ಪರಿಶೀಲನೆ ಮಾಡಲಾಗುತ್ತಿದೆ
-ಶಿವಪ್ಪ ಲಮಾಣಿ, ತಹಶೀಲ್ದಾರ್, ಆನೇಕಲ್