ಫೆ.29 ರಿಂದ ‘ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ’: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: 2024ರ ಫೆಬ್ರವರಿ 29ರಿಂದ ಮಾರ್ಚ್ 7ರ ವರೆಗೆ ‘ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು ಬೆಂಗಳೂರಿನಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ಚಲನಚಿತ್ರೋತ್ಸವದ 15ನೇ ಆವೃತ್ತಿಯನ್ನು ಫೆ.29ರ ಸಂಜೆ ಉದ್ಘಾಟನೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
‘ಚಿತ್ರೋತ್ಸವವು ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದಿದ್ದು, ವಿದೇಶಿ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಅಲ್ಲದೆ, ಕನ್ನಡ ಸಹಿತ ದೇಶದ ವಿವಿಧ ಭಾಷೆ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಹಾಗೂ ಮಾರ್ಚ್ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ರಾಜ್ಯಪಾಲರು ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸೌಹಾರ್ದತೆಗೆ ಒತ್ತು: ಕೋಮುವಾದದ, ಶಾಂತಿ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರಕಾರ ಒದಗಿಸಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಚಲನಚಿತ್ರೋತ್ಸವ ಆಯೋಜನೆಗೆ 1.61ಕೋಟಿ ರೂ.ಲಭ್ಯವಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನ ಒದಗಿಸಲು ತೀರ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ನಟಿ ಲೀಲಾವತಿ, ನಿರ್ದೇಶಕ ಭಗವಾನ್ ಮತ್ತು ಸಿ.ವಿ.ಶಿವಶಂಕರ್ ಮೊದಲಾದ ಗಣ್ಯರಿಗೆ ಗೌರವ ಸಲ್ಲಿಸಲು ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ದೇಶ-ವಿದೇಶಗಳ ಉತ್ತಮ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿನ ಪ್ರದರ್ಶನಕ್ಕಾಗಿ ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಚಿತ್ರೋತ್ಸವದ ಕೆಲಸಗಳಲ್ಲಿ ಪರಿಣಿತಿ ಹೊಂದಿರುವ ವಿದ್ಯಾಶಂಕರ್ ರನ್ನು ಕಲಾತ್ಮಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಸಂಘಟಕರು/ತಾಂತ್ರಿಕ ಸಲಹೆಗಾರರು/ಸ್ವಯಂ ಸೇವಕರುಗಳನ್ನು ನೇಮಿಸಿಕೊಂಡು ಸಂಭಾವನೆ ಆಧಾರದಲ್ಲಿ ಇವರ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.