ಬೆಂಗಳೂರು | ಕುಕ್ಕರ್ ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ ಮಾರಾಟ: ವಿದೇಶಿ ಪ್ರಜೆ ಬಂಧನ
ಬೆಂಗಳೂರು, ನ.10: ಅಡುಗೆ ಮಾಡುವ ಪ್ರೆಷರ್ ಕುಕ್ಕರ್‍ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ ದೇಶ, ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್, ನೈಜೀರಿಯಾ ಮೂಲದ ಬೆಂಜಮಿನ್ ಬಂಧಿತ ಆರೋಪಿ. ಈತನಿಂದ 10 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಮತ್ತು ರಾಸಾಯನಿಕ ಆಮ್ಲ ಸೇರಿದಂತೆ ಮತ್ತಿತರ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಆರೋಪಿ ಅವಲಹಳ್ಳಿಯ ತನ್ನ ಮನೆಯಲ್ಲಿಯೇ ಕಚ್ಚಾ ಪದಾರ್ಥಗಳನ್ನು ಬಳಸಿ ಪ್ರೆಷರ್ ಕುಕ್ಕರ್‍ನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಸುತ್ತಿದ್ದ. ನಂತರ ಅವುಗಳನ್ನು ರಾಜ್ಯ, ಅನ್ಯರಾಜ್ಯ ಸೇರಿದಂತೆ ವಿದೇಶಗಳ ಗಿರಾಕಿಗಳು ಹಾಗೂ ಮಾದಕ ಸರಬರಾಜುಗಾರರಿಗೆ ಮಾರಾಟ ಮಾಡುತ್ತಿದ್ದ ಎಂದು ಅವರು ಹೇಳಿದರು.
ಆರಂಭದಲ್ಲಿ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಈತನನ್ನು 100 ಗ್ರಾಂ ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಆದರೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅವಲಹಳ್ಳಿಯ ತನ್ನ ಮನೆಯಲ್ಲಿಯೇ ಸಣ್ಣ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವ ವಿಚಾರ ಬಯಲಾಗಿತ್ತು ಎಂದು ಬಿ.ದಯಾನಂದ್ ತಿಳಿಸಿದರು.
ವ್ಯಾಪಾರಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಆರೋಪಿಯ ವೀಸಾ ಅವಧಿ 2022ರಲ್ಲಿ ಅಂತ್ಯವಾಗಿದೆ. ಆದರೆ, 2021ರಲ್ಲಿ ಬಟ್ಟೆ ವ್ಯಾಪಾರ ಮಾಡುವುದಾಗಿ ಮನೆ ಬಾಡಿಗೆಗೆ ಪಡೆದು ನಗರದಲ್ಲಿ ವಾಸವಿದ್ದ. ಈ ಹಿಂದೆ ಹೈದರಾಬಾದ್‍ನಲ್ಲಿ ಬಂಧನವಾಗಿದ್ದ ಎನ್ನುವ ವಿಚಾರ ತನಿಖೆಯಿಂದ ತಿಳಿದುಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದರು.