ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇ | ಅವೈಜ್ಞಾನಿಕ ಕಾಮಗಾರಿ ಪತ್ತೆಗೆ ತಾಂತ್ರಿಕ ತಂಡ ರಚನೆಗೆ ತೀರ್ಮಾನ: ಸಚಿವ ಚಲುವರಾಯಸ್ವಾಮಿ
ಫೋಟೊ- ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇ
ಬೆಂಗಳೂರು, ಜೂ.26: ‘ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಅಪಘಾತಗಳು, ಅಲ್ಲಿ ಆಗಬೇಕಾದ ಕೆಲಸಗಳು, ಮೂಲಭೂತ ಸೌಕರ್ಯಗಳು ಸೇರಿದಂತೆ ಇನ್ನಿತರ ಸಮಸ್ಯೆಗಳ ಪತ್ತೆಗೆ ತಾಂತ್ರಿಕ ತಂಡ ರಚನೆಗೆ ತೀರ್ಮಾನಿಸಲಾಗಿದೆ’ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತಿಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಸಮಸ್ಯೆಗಳು ಕಂಡು ಬರುತ್ತಿದ್ದು, ಅವುಗಳನ್ನು ಮಾಧ್ಯಮಗಳು ವರದಿ ಮಾಡುತ್ತಿವೆ. ಸಾರ್ವಜನಿಕರು, ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಆದರೆ, ಇದರ ಬಗ್ಗೆ ಇನ್ನೂ ನಿರಾಸಕ್ತಿ ವಹಿಸಲಾಗಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ತಿಳಿಸಿದರು.
ಅಪಘಾತಗಳು ಹೆಚ್ಚಳವಾಗುವುದಕ್ಕೆ ಕಾರಣಗಳೇನು? ಯಾವ ಯಾವ ಸ್ಥಳಗಳಲ್ಲಿ ಹೆಚ್ಚಿನ ಅಪಘಾತ ಸಂಭವಿಸುತ್ತದೆ? ಮಳೆಗಾಲದಲ್ಲಿ ನೀರು ರಸ್ತೆಗಳಲ್ಲೆ ನಿಲ್ಲುತ್ತಿದೆ. ಇದಕ್ಕೆ ಕಾರಣವೇನು? ಸರ್ವೀಸ್ ರಸ್ತೆಯಲ್ಲೂ ನೀರು ನಿಲ್ಲುತ್ತಾ ಇದೆ. ಇವು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಲಿದೆ? ಇದಕ್ಕೇನು ಪರಿಹಾರ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಪ್ರಶ್ನಿಸಿದ್ದಾರೆ ಎಂದು ಅವರು ಹೇಳಿದರು.
ಹೈವೇಯಲ್ಲಿ ಹಾಕಿರುವ ರಸ್ತೆ ದೀಪಗಳು ಹಾಳಾಗಿದ್ದು, ರಾತ್ರಿ ವೇಳೆ ಸಂಚಾರಕ್ಕೆ ಕಷ್ಟವಾಗುತ್ತಿದೆ. ಅಂಡರ್ಪಾಸ್ಗಳಲ್ಲಿ ಅನೇಕ ಸಮಸ್ಯೆಗಳಿವೆ. ಚೈನ್ಲಿಂಕ್ ಸರಿಯಾಗಿ ಆಗಿಲ್ಲ, ಪಾಕಿರ್ಂಗ್ ಸಮಸ್ಯೆ ಇದೆ. ಎಲೆಕ್ಟ್ರಿಕ್ ಪೆÇೀಲ್ಗಳ ಸಮಸ್ಯೆ ಇದೆ. ಆ್ಯಂಬುಲೆನ್ಸ್ಗಳ ವ್ಯವಸ್ಥೆ ಇಲ್ಲ. ಇರುವುದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸ್ಕೈ ವಾಕ್ಗಳ ನಿರ್ಮಾಣ ಬಾಕಿ ಇದೆ ಎಂಬಿತ್ಯಾದಿ ವಿಷಯಗಳನ್ನು ಸಭೆಯ ಗಮನಕ್ಕೆ ತರಲಾಯಿತು ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕಾಮಗಾರಿಯೇ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಏಕೆ?: ಈ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಾರಂಭಿಸಿದಾಗ ಒಪ್ಪಂದಲ್ಲಿದ್ದ ಷರತ್ತುಗಳು ಏನಿತ್ತು? ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮತ್ತು ಡಿಎಲ್ವಿ ಸಂಸ್ಥೆಯ ನಡುವೆ ಆಗಿರುವ ಒಪ್ಪಂದದ ಪ್ರಕಾರವಾಗಿ ರಸ್ತೆ ಕಾಮಗಾರಿ ನಡೆಯುತ್ತಿದೆಯೇ? ರಸ್ತೆ ಕಾಮಗಾರಿ ಸಂಪೂರ್ಣಗೊಳ್ಳದೆ ಟೋಲ್ ಸಂಗ್ರಹ ಮಾಡುತ್ತಿರುವುದು ಏಕೆ? ಕಾಮಗಾರಿ ಪೂರ್ಣಗೊಂಡ ಮೇಲೆ ಟೋಲ್ ಸಂಗ್ರಹ ಮಾಡಬೇಕಲ್ಲವೇ? ಎಂಬ ಪ್ರಶ್ನೆಯನ್ನೂ ಈ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಕೇಳಲಾಯಿತು ಎಂದು ಅವರು ಹೇಳಿದರು.
ತಾಂತ್ರಿಕ ತಂಡ ರಚನೆಗೆ ನಿರ್ಣಯ: ಅಲ್ಲದೆ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ನಗರಗಳಲ್ಲಿ ಅನೇಕ ಸಮಸ್ಯೆಗಳಿವೆ. ಪುಟ್ಪಾಥ್ ಸಮಸ್ಯೆಗಳಿವೆ. ಆಗಮನ(ಎಂಟ್ರಿ)-ನಿರ್ಗಮನ(ಎಕ್ಸಿಟ್) ಪಾಯಿಂಟ್ಸ್ಗಳು ಆಗಬೇಕಿದೆ. ಹೀಗೆಯೇ ಇನ್ನೂ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಹಾಗೆಯೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರವು ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದು, ಒಂದು ತಾಂತ್ರಿಕ ತಂಡವನ್ನು ರಚನೆ ಮಾಡಿ, ಅದರಲ್ಲಿ ಅವೈಜ್ಞಾನಿಕ ಕಾಮಗಾರಿ ಮತ್ತು ಸಾರ್ವಜನಿಕರಿಂದ ಬಂದಿರುವ ದೂರುಗಳ ಬಗ್ಗೆ ಅಧ್ಯಯನ ಮಾಡಿ ಸರಕಾರಕ್ಕೆ ವರದಿಯನ್ನು ಕೊಡಲಾಗುವುದು ಎಂದು ಅವರು ಹೇಳಿದರು.
ಸಿಎಂ ನೇತೃತ್ವದ ಸಭೆ ನಡೆಸಲು ತೀರ್ಮಾನ: ಮುಖ್ಯಮಂತ್ರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ನೂನ್ಯತೆಗಳ ಬಗ್ಗೆ ಚರ್ಚಿಸಬೇಕು. ಕೇಂದ್ರ ಹೆದ್ದಾರಿ ಪ್ರಾಧಿಕಾರದ ಸಚಿವರಿಗೂ ಈ ಬಗ್ಗೆ ಗಮನಕ್ಕೆ ತರಬೇಕೆಂಬುದು ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಯಿತು.