ಬೆಂಗಳೂರು | ಜ್ಯೂಸ್ ಮಾದರಿಯಲ್ಲಿ ಡ್ರಗ್ಸ್ ಮಾರಾಟ; ಆರೋಪಿಯ ಬಂಧನ
ಬೆಂಗಳೂರು, ಜು.6: ಜ್ಯೂಸ್ ಮಾದರಿಯಲ್ಲಿ ಡ್ರಗ್ಸ್ ಮಾರುವ ಜಾಲದ ಸದಸ್ಯನೊಬ್ಬನನ್ನು ದಕ್ಷಿಣ ವಿಭಾಗದ ವಿ.ವಿ.ಪುರಂ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ರಾಜಸ್ಥಾನ ಮೂಲದ ಗುನಾಂ ಸಿಂಗ್ ಬಂಧಿತ ಆರೋಪಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಆರೋಪಿಯ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು 55 ಕೆ.ಜಿ. ತೂಕದ 60 ಲಕ್ಷರೂ. ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಒಂದು ಲೀಟರ್ ನೀರಿನಲ್ಲಿ ಮಾದಕ ದ್ರಾವಣವನ್ನು ಬೆರೆಸುತ್ತಿದ್ದರು. ಈ ನೀರು ಹೆಚ್ಚಾಗಿ ಘಾಟು ಇರುವುದರಿಂದ ವಿವಿಧ ಕಂಪೆನಿಗಳ ಜ್ಯೂಸ್ ನೊಳಗೆ ಬೆರೆಸಿ ಕೊಡುತ್ತಿದ್ದರು. ಈ ಮಾಹಿತಿ ತಿಳಿದು ವಿ.ವಿ.ಪುರಂನಲ್ಲಿ ಶೇಖರಣೆ ಮಾಡಲಾಗಿ ದ್ದ ಗೋಡೌನ್ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಈ ಮಾದಕ ಪದಾರ್ಥ ಅಫೀಮಿನ ವಿಧವಾಗಿದೆ ಇದನ್ನು ಹೆಚ್ಚಾಗಿ ರಾಜಸ್ಥಾನದಲ್ಲಿ ಬೆಳೆಯಲಾಗುತ್ತದೆ. ಇದರಿಂದ ಅಫೀಮು ತಯಾರು ಮಾಡಿ ಲಕ್ಷ ಲಕ್ಷ ರೂ. ಗಳ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದನ್ನು ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.