ಬೆಂಗಳೂರು | ವಿಜ್ಞಾನಿ ಕಾರಿಗೆ ಕಲ್ಲೆಸೆದು ಹಲ್ಲೆಗೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ
ಬೆಂಗಳೂರು, ಸೆ.12: ಕಾರಿನ ಗಾಜಿಗೆ ಕಲ್ಲೆಸೆದು ವಿಜ್ಞಾನಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಮೈಲಾರಿ(22), ನವೀನ್(22) ಹಾಗೂ ಶಿವರಾಜ್(30) ಬಂಧಿತ ಆರೋಪಿಗಳಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಾದ ಸೋಮ ಅಲಿಯಾಸ್ ಸೋನು, ಕೀರ್ತಿ ಅಲಿಯಾಸ್ ಉಮೇಶ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ರಾವುತನಹಳ್ಳಿಯಲ್ಲಿ ಆ.24ರಂದು ನ್ಯಾನೊ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ (ಸಿಇಎನ್‍ಎಸ್) ವಿಜ್ಞಾನಿ ಅಶುತೋಷ್ ಕುಮಾರ್ ಸಿಂಗ್(34) ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಲ್ಲೆಗೆ ಯತ್ನಿಸಿದ್ದರು. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ವಿಶೇಷ ಪೊಲೀಸ್ ತಂಡ ರಚಿಸಿ ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿ ಬಳಿ ಕಾರ್ಯಾಚರಣೆ ನಡೆಸಿ ಮಧ್ಯರಾತ್ರಿ ದರೋಡೆಗೆ ಹೊಂಚು ಹಾಕುತ್ತಿದ್ದಾಗ ಮೂವರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಳಿಯಿದ್ದ ಮಾರಕಾಸ್ತ್ರ, ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.