‘ಬೆಂಗಳೂರು ಟೆಕ್ ಸಮ್ಮಿಟ್’ ನವೋದ್ಯಮಗಳ 35 ವಿನೂತನ ಉತ್ಪನ್ನ ಮತ್ತು ಪರಿಹಾರಗಳ ಅನಾವರಣ:ಪ್ರಿಯಾಂಕ್ ಖರ್ಗೆ
Photo: x//@PriyankKharge
ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್ನ 26ನೇ ಆವೃತ್ತಿಯಲ್ಲಿ ವಿವಿಧ ನವೋದ್ಯಮ(ಸ್ಟಾರ್ಟ್ಅಪ್)ಗಳು ಅಭಿವೃದ್ಧಿಪಡಿಸಿದ 35 ವಿನೂತನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅನಾವರಣಗೊಳಿಸಿದೆ.
ನವೋದ್ಯಮ ಇನ್ನೋವೇಶನ್ ವಲಯಗಳಲ್ಲಿ ನಡೆದ ನವೋದ್ಯಮ ಉತ್ಪನ್ನ ಬಿಡುಗಡೆಯ ಎರಡನೇ ಆವೃತ್ತಿ ಇದಾಗಿದೆ. ಈ ಉಪಕ್ರಮವು ವೈವಿಧ್ಯಮಯ ಕೈಗಾರಿಕೆಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ರಾಜ್ಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸೆಕ್ಟರ್-ಆಗ್ನೋಟಿಕ್ ಇನೋವೇಷನ್: ಇಂದು ಬಿಡುಗಡೆ ಮಾಡಿದ ಉತ್ಪನ್ನಗಳಾದ ಐಟಿ/ಬಿಟಿ ಇಎಸ್, ಅಗ್ರಿ-ಟೆಕ್, ಮೆಡ್-ಟೆಕ್, ಹೆಲ್ತ್ ಕೇರ್, ಕ್ಲೀನ್-ಟೆಕ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಡೀಪ್ ಟೆಕ್, ಬ್ಲಾಕ್ಚೇನ್, ಐಒಟಿ, ಸೈಬರ್ ಸೆಕ್ಯುರಿಟಿ, ಎನ್ವಿರಾನ್ಮೆಂಟ್ ಟೆಕ್, ಎವಿಜಿಸಿ ಮತ್ತು ಇಎಸ್ಡಿಎಂ ಸೇರಿದಂತೆ ಹಲವಾರು ಕ್ಷೇತ್ರಗಳನ್ನು ವ್ಯಾಪಿಸಿದೆ ಎಂದು ಅವರು ಹೇಳಿದ್ದಾರೆ.
ಕೊಡುಗೆಗಳ ವೈವಿಧ್ಯತೆ: ವಿನೂತನ ಪರಿಹಾರಗಳ ಶ್ರೇಣಿಯಲ್ಲಿ, ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಯೋಜಿಸುವ ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್, ವಾಹನ ತಯಾರಿಕೆಯಲ್ಲಿನ ಪ್ರಗತಿ, ಪಾದರಕ್ಷೆ ಮತ್ತು ಪರಿಕರಗಳ ಆವಿಷ್ಕಾರ, ವಾಯುಪಡೆ ಮತ್ತು ಸೇನಾಪಡೆ ತಂತ್ರಜ್ಞಾನಗಳು, ಹೊರಹರಿವಿನ ವಾಯು ಸಂಸ್ಕರಣೆ, ಮೋಸದ ವಹಿವಾಟನ್ನು ನಿಯಂತ್ರಿಸುವ ಅಪ್ಲಿಕೇಶನ್ಗಳು, ಫ್ಯಾಬ್ರಿಕ್ ದೃಢೀಕರಣ ಉಪಕರಣಗಳು, ಅನಿಮೇಷನ್ ಮತ್ತು ಕಾಮಿಕ್ಸ್, ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಡೀಪ್ ಟೆಕ್ ಆಧಾರಿತ ಪ್ಲಾಟ್ಫಾರ್ಮ್ಗಳು ಸೇರಿದಂತೆ ಹಲವು ಇನೋವೇಷನ್ಗಳು ಒಳಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಇನ್ಕ್ಯುಬೇಟರ್ ಬೆಂಬಲ: ಬಹುಪಾಲು ಸ್ಟಾರ್ಟ್ಅಪ್ಗಳು ರಾಜ್ಯ ಸರಕಾರದ ಬೆಂಬಲಿತ ಇನ್ಕ್ಯುಬೇಟರ್ ಗಳಲ್ಲಿ ಪ್ರವರ್ಧಮಾನಕ್ಕೆ ಬಂದಿವೆ, ಉದಾಹರಣೆಗೆ ಕೆ-ಟೆಕ್ ಇನ್ನೋವೇಶನ್ ಹಬ್ಗಳು, ಸೆಂಟರ್ಸ್ ಆಫ್ ಎಕ್ಸಲೆನ್ಸ್ (ಸಿಒಇ), ಮತ್ತು ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ (ಟಿಬಿಐ) ಸಿ-ಕ್ಯಾಂಪ್, ಜೈನ್ ಇನ್ಕ್ಯುಬೇಶನ್ ಸೆಂಟರ್, ದೇಶಪಾಂಡೆ ಸ್ಟಾರ್ಟ್ಅಪ್ಗಳು ಮತ್ತು ಇ - ಸೈಬರ್ ಸೆಕ್ಯುರಿಟಿ ನಾಸ್ಕಾಮ್ನಂತಹ ಸಂಸ್ಥೆಗಳಿಂದ ಆಂಕರ್ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸರಕಾರದ ಬೆಂಬಲ: ಈ ಪ್ರದರ್ಶನದಲ್ಲಿ ಕಾಣಿಸಿಕೊಂಡಿರುವ ಹಲವಾರು ಸ್ಟಾರ್ಟ್ಅಪ್ಗಳು ಸರಕಾರದ ಗ್ರಾಂಟ್-ಇನ್-ಏಡ್ ಸೀಡ್ ಫಂಡಿಂಗ್ ಕಾರ್ಯಕ್ರಮದ ಮೂಲಕ ಹಣಕಾಸಿನ ಅನುದಾನವನ್ನು ಪಡೆದಿವೆ, ಇದು ಉದ್ಯಮಶೀಲ ಪ್ರತಿಭೆಯನ್ನು ಪೊಷಿಸಲು ಮತ್ತು ನಾವೀನ್ಯತೆಯ ಸಂಸ್ಕತಿಯನ್ನು ಬೆಳೆಸಲು ರಾಜ್ಯದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ವೈವಿಧ್ಯತೆ ಮತ್ತು ಸೇರ್ಪಡೆ: 36 ಸ್ಟಾರ್ಟ್ಅಪ್ಗಳಲ್ಲಿ ಗಮನಾರ್ಹವಾಗಿ 9 ಮಹಿಳಾ ನೇತೃತ್ವದ ಸ್ಟಾರ್ಟ್ಅಪ್ಸ್ಗಳು ಇದ್ದು, ಕರ್ನಾಟಕದ ಸ್ಟಾರ್ಟ್ಅಪ್ಸ್ ಪರಿಸರ ವ್ಯವಸ್ಥೆಯ ವೈವಿಧ್ಯಮಯ ಸ್ವರೂಪ ಹಾಗೂ ಮಹಿಳೆಯರಿಗೆ ಆದ್ಯತೆ ನೀಡುತ್ತಿರುವುದನ್ನು ಇದು ಒತ್ತಿ ಹೇಳುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.