ಬೆಂಗಳೂರು | ಅತ್ತೆಯನ್ನು ಹತೈಗೈದು ಹೃದಯಾಘಾತ ಕಥೆ ಕಟ್ಟಿದ ಸೊಸೆ!
ಮೂವರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಲ್ಲಿನ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಸೊಸೆ ರಶ್ಮಿ ಸೇರಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಅ.5ರಂದು ಲಕ್ಕಮ್ಮ(52) ಎಂಬುವರನ್ನು ಕೊಲೆಗೈದಿದ್ದರು. ಈ ಸಂಬಂಧ ಲಕ್ಕಮ್ಮ ಪುತ್ರ ಮಂಜುನಾಥ್ ಕೊಲೆ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ʼʼಲಕ್ಕಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳು, ಹೃದಯಾಘಾತವೆಂದು ನಾಟಕವಾಡಿದ್ದರು. ಲಕ್ಕಮ್ಮ ಅವರ ಮಗ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡು, ಆರೋಪಿ ರಶ್ಮಿ, ಪ್ರಿಯಕರ ಅಕ್ಷಯ್ ಹಾಗೂ ಪುರುಷೋತ್ತಮ್ನನ್ನು ಬಂಧಿಸಲಾಗಿದೆʼʼ ಎಂದು ತಿಳಿಸಿದರು.
ʼಲಕ್ಕಮ್ಮ ಅವರ ಮಗ ಮಂಜುನಾಥ್, ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, 10 ವರ್ಷಗಳ ಹಿಂದೆ ರಶ್ಮಿ ಜೊತೆ ಮದುವೆಯಾಗಿತ್ತು. ಬಹುಮಹಡಿ ಕಟ್ಟಡದಲ್ಲಿ ಮಂಜುನಾಥ್–ರಶ್ಮಿ ಕುಟುಂಬ ವಾಸವಿತ್ತು. ಅದೇ ಕಟ್ಟಡದ ಮೊದಲ ಮಹಡಿಯ ಮನೆಯಲ್ಲಿ ಆರೋಪಿ ಅಕ್ಷಯ್ ಬಾಡಿಗೆಗಿದ್ದ. ಈ ಮಧ್ಯೆ ರಶ್ಮಿ ಮತ್ತು ಅಕ್ಷಯ್ ನಡುವೆ ಆತ್ಮೀಯತೆ ಬೆಳೆದಿದ್ದು, ಕೆಲ ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಸೊಸೆಯ ನಡವಳಿಕೆಯಲ್ಲಿ ಅನುಮಾನಗೊಂಡ ಅತ್ತೆ ಲಕ್ಕಮ್ಮ ಮನೆ ಬಿಟ್ಟು ಹೊರಗಡೆ ಹೋಗುತ್ತಿರಲಿಲ್ಲ. ಹೀಗಾಗಿ ಪ್ರಿಯಕರನ ಜತೆ ರಶ್ಮಿ ಆತ್ಮೀಯವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆʼ ಎಂದು ಪೊಲೀಸರು ಹೇಳಿದರು.
- ನಿದ್ದೆ ಮಾತ್ರೆ ಬೆರೆಸಿದ್ದ ಮುದ್ದೆ ತಿನ್ನಿಸಿ ಕೊಲೆ!
‘ಅ.5ರಂದು ಲಕ್ಕಮ್ಮ ಹಾಗೂ ರಶ್ಮಿ ನಡುವೆ ಜಗಳವಾಗಿತ್ತು. ಅಂದು ಮಧ್ಯಾಹ್ನ ನಿದ್ದೆ ಮಾತ್ರೆ ಬೆರೆಸಿ ರಾಗಿ ಮುದ್ದೆ ತಯಾರಿಸಿದ್ದ ರಶ್ಮಿ, ಅತ್ತೆಗೆ ತಿನ್ನಿಸಿದ್ದರು. ಇದರಿಂದಾಗಿ ಲಕ್ಕಮ್ಮ ನಿದ್ರೆಗೆ ಜಾರಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ಬಂದಿದ್ದ ಅಕ್ಷಯ್ ಹಾಗೂ ಈತನ ಸ್ನೇಹಿತ ಪುರುಷೋತ್ತಮ್, ಕತ್ತು ಹಿಸುಕಿ ಲಕ್ಕಮ್ಮ ಅವರನ್ನು ಕೊಂದು ಸ್ಥಳದಿಂದ ಹೊರಟು ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ