ಬೆಂಗಳೂರು | ಯುವತಿ ಅಸಹಜ ಸಾವು ಪ್ರಕರಣ: ಸೋಶಿಯಲ್ ಮೀಡಿಯಾ ರೀಲ್ಸ್ ಸ್ಟಾರ್ ಗಳ ವಿರುದ್ಧ ಎಫ್‌ಐಆರ್, ತನಿಖೆ ಚುರುಕು
ಬೆಂಗಳೂರು, ಸೆ.16: ಯುವತಿಯೊಬ್ಬಳ ಅಸಹಜ ಸಾವು ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ರೀಲ್ಸ್ ಸ್ಟಾರ್‌ಗಳ ವಿರುದ್ಧ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅಬ್ರಾರ್ ಶೇಕ್, ಇರ್ಫಾನ್, ಶಾಹೀದ್ ಸೇರಿ ಹಲವರ ವಿರುದ್ಧ ಐಪಿಸಿ ಸೆಕ್ಷನ್ 306, 34 ಅಡಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇಲ್ಲಿನ ಜೆಪಿನಗರದ ಆಯೋಧ್ಯೆ ನಗರದಲ್ಲಿ ವಾಸವಾಗಿದ್ದ ಮುಸ್ಕಾನ್ ಖಾನಮ್ (19) ಅನ್ನು ಅಬ್ರಾರ್ ಶೇಕ್ ಪರಿಚಯ ಮಾಡಿಕೊಂಡಿದ್ದು, ಮದುವೆ ಆಗುವುದಾಗಿ ನಂಬಿಸಿದ್ದಾನೆ. ಆನಂತರ, ಆಕೆಯೊಂದಿಗೆ ಹಲವು ದಿನಗಳಿಂದ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ.ಆದರೆ, ಇತ್ತೀಚಿಗೆ ತನ್ನ ಮನೆಯ ಕುಟುಂಬಸ್ಥರು ವಿವಾಹಕ್ಕೆ ಒಪ್ಪುತ್ತಿಲ್ಲ ಎಂದು ಸಾಬಾಬೂ ಹೇಳಿದ್ದ. ಜತೆಗೆ, ವಿಷ ಸೇವಿಸುವಂತೆ ಮುಸ್ಕಾನ್ ಖಾನಮ್‌ಗೆ ಅಬ್ರಾರ್ ಶೇಕ್ ಪ್ರಚೋದಿಸಿದ್ದ ಎಂದು ದೂರಿನಲ್ಲಿ ಸಂತ್ರಸ್ತೆಯ ಸಹೋದರಿ ದೂರಿದ್ದಾರೆ.
ಇನ್ನೂ, ಸೆ.10ರಂದು ಮುಸ್ಕಾನ್ ಖಾನಮ್ ನಿವಾಸಕ್ಕೆ ಬಂದಿದ್ದ ಅಬ್ರಾರ್ ಶೇಕ್, ಈತನ ಸ್ನೇಹಿತರಾದ ಇರ್ಫಾನ್, ಶಾಹೀದ್ ಎಂಬುವರು, ಆಕೆಯನ್ನು ನಿಂದಿಸಿ ವಿಷ ಸೇವಿಸುವಂತೆ ಒತ್ತಡ ಹೇರಿ ಪರಾರಿಯಾಗಿದ್ದರು.ಆನಂತರ ಮುಸ್ಕಾನ್ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸೆ.11ರಂದು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.