ಮಂಡ್ಯಕ್ಕೆ ಆಗಮಿಸಲಿರುವ ಬರಾಕ್ ಒಬಾಮಾ ದಂಪತಿ
Photo -PTI
ಮಂಡ್ಯ, ಆ.31: ಸಕ್ಕರೆ ನಾಡು ಮಂಡ್ಯ ನಗರಕ್ಕೆ ಡಿಸೆಂಬರ್ ತಿಂಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಆಗಮಿಸಲಿದ್ದಾರೆ.
ʼಭೂತಾಯಿʼ ಟ್ರಸ್ಟ್ ನಿಂದ ಮಂಡ್ಯದ ಹಲ್ಲೆಗೆರೆಯಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ ಶಂಕುಸ್ಥಾಪನೆಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ, ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಡಿಸೆಂಬರ್ ತಿಂಗಳಲ್ಲಿ ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಭೂತಾಯಿ ಟ್ರಸ್ಟ್ ನ ಅಧ್ಯಕ್ಷ , ಅಮೆರಿಕದ ವೈದ್ಯ ಡಾ. ಲಕ್ಷ್ಮಿನರಸಿಂಹ ಮೂರ್ತಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ ನೇತೃತ್ವದ ನಿಯೋಗವು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಹಲ್ಲೆಗೆರೆಯಲ್ಲಿ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುದ್ದೀಪ,ಕುಡಿಯುವ ನೀರು ಮುಂತಾದ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಿ ಕೊಡುವಂತೆ ನಿಯೋಗವು ಮನವಿ ಮಾಡಿತು.