ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ : ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು ಹೀಗೆ..

ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು : ಬಿಜೆಪಿ ಪಕ್ಷದನಾಯಕರ ವಿರುದ್ಧ ಬಂಡಾಯವೆದ್ದಿರುವ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಶಿಸ್ತು ಸಮಿತಿಯು ಶೋಕಾಸ್ ನೋಟಿಸ್ ನೀಡಿದೆ. 10 ದಿನಗಳ ಒಳಗಾಗಿ ಉತ್ತರಿಸುವಂತೆ, ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿಯೂ ಯತ್ನಾಳ್ಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ, ನೋಟಿಸ್ ನೀಡಿರುವ ಬಗ್ಗೆ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ʼಬಿಜೆಪಿಯ ಶಿಸ್ತು ಸಮಿತಿ ಮುಖ್ಯಸ್ಥರು ನೀಡಿರುವ ನೋಟಿಸ್ಗೆ ಉತ್ತರ ನೀಡುತ್ತೇನೆ. ಕರ್ನಾಟಕ ಬಿಜೆಪಿಯ ಸದ್ಯದ ಸ್ಥಿತಿಗತಿಯ ಬಗ್ಗೆ ವಾಸ್ತವಾಂಶಗಳನ್ನು ತೆರೆದಿಡುತ್ತೇನೆ. ಹಿಂದುತ್ವ ಪರ ಮತ್ತು ಭ್ರಷ್ಟಾಚಾರ, ವಕ್ಫ್ ಆಸ್ತಿ ವಿಚಾರ, ಕುಟುಂಬ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ನನ್ನ ಬದ್ಧತೆಯು ಅಚಲವಾಗಿ ಉಳಿಯಲಿದೆʼ ಎಂದು ಬರೆದುಕೊಂಡಿದ್ದಾರೆ.
ಪಕ್ಷದ ನಿಲುವುಗಳಿಗೆ ವಿರುದ್ಧವಾಗಿ ಮತ್ತು ರಾಜ್ಯ ನಾಯಕರ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಸೋಮವಾರ ಶೋಕಾಸ್ ನೋಟಿಸ್ ನೀಡಿದೆ.