ಅಪ್ಪ-ಮಕ್ಕಳ ವಿರುದ್ಧ ದೂರು ನೀಡಲು ನಾಳೆ ದಿಲ್ಲಿಗೆ ತೆರಳುವೆ : ಯತ್ನಾಳ್
"ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಅಂತ್ಯ ಆಗಬೇಕು"

ವಿಜಯೇಂದ್ರ/ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು : ‘ಅಪ್ಪ-ಮಕ್ಕಳ ವಿರುದ್ಧ ದೂರು ನೀಡಲೆಂದು ನಾಳೆ(ಫೆ.4) ಹೊಸದಿಲ್ಲಿ ಪ್ರವಾಸ ಕೈಗೊಂಡಿದ್ದೇವೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ವಿಜಯಪುರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಭ್ರಷ್ಟಾಚಾರದ ಕುಟುಂಬ ಬೇಕೆ? ಅಥವಾ ಪ್ರಾಮಾಣಿಕರು ಹಾಗೂ ಪಕ್ಷ ನಿಷ್ಠ ಕಾರ್ಯಕರ್ತರು ಬೇಕೆ? ಎಂದು ನಾವು ವರಿಷ್ಠರನ್ನು ಪ್ರಶ್ನಿಸುತ್ತೇನೆ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಅಂತ್ಯ ಆಗಬೇಕು ಎಂಬುದು ನಮ್ಮ ಬೇಡಿಕೆ ಎಂದರು.
ಸೂಕ್ತ ವ್ಯಕ್ತಿಗಳ ಕೈಗೆ ರಾಜ್ಯ ಬಿಜೆಪಿ ನಾಯಕತ್ವ ಕೊಡಬೇಕೆಂಬುದು ನಮ್ಮ ಆಗ್ರಹ. ಇದನ್ನು ಹೈಕಮಾಂಡ್ ಆಲಿಸಲಿದೆ ಎಂಬ ವಿಶ್ವಾಸವಿದೆ ಎಂದ ಅವರು, ವಿಜಯೇಂದ್ರನನ್ನೇ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರೆಸಿದರೆ, ರಾಜ್ಯದಲ್ಲಿ ಬಿಜೆಪಿ ಉಳಿಯುವುದಿಲ್ಲ ಎಂಬುದನ್ನು ವರಿಷ್ಠರಿಗೆ ಮನವರಿಕೆ ಆಗಿದೆ. ಹೀಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಖಚಿತ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬಿಎಸ್ವೈ ಕುಟುಂಬ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಹೊಂದಾಣಿಕೆ ರಾಜಕಾರಣ ಇದೆ. ಇದೇ ಕಾರಣಕ್ಕೆ ಡಿಕೆಶಿ ಹೀನಾಯವಾಗಿ ಬೈದರೂ ವಿಜಯೇಂದ್ರ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ವಿಜಯೇಂದ್ರಗೆ ದೊರೆತಿರುವ ಶಾಸಕ ಸ್ಥಾನ ನಾನು ಕೊಟ್ಟಿರುವ ಭಿಕ್ಷೆ ಎಂದು ಶಿವಕುಮಾರ್ ಹೇಳಿದರೂ, ವಿಜಯೇಂದ್ರ ತುಟಿ ಬಿಚ್ಚುವುದಿಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.