ಮೋದಿಗೆ ಪರಿಸ್ಥಿತಿಯನ್ನೂ ನಿಭಾಯಿಸುವ ಮುತ್ಸದ್ದಿತನ ಇದೆ : ಬಸವರಾಜ ಬೊಮ್ಮಾಯಿ
ಬೆಂಗಳೂರು: ನರೇಂದ್ರ ಮೋದಿಗೆ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ರಾಜಕೀಯ ಮುತ್ಸದ್ದಿತನ ಇದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಲೋಕಸಭೆಗೆ ಬಹಳ ವಿಶೇಷವಾಗಿ ಇರುವ ಸಂದರ್ಭದಲ್ಲಿ ಆಯ್ಕೆಯಾದೆ. ಪ್ರಧಾನಿ ಹಾಗೂ ಪಕ್ಷದ ಹಿರಿಯರ ಮಾತಿನಂತೆ ಸ್ಪರ್ಧೆ ಮಾಡಿದೆ. ಅವರ ಲೆಕ್ಕಾಚಾರ ಸರಿಯಾಗಿದೆ. ಮೋದಿ ಮೂರನೇ ಬಾರಿ ಪ್ರಧಾನಿ ಆಗುತ್ತಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದರು.
ಮೋದಿ ಬಹಳ ವಿಭಿನ್ನವಾಗಿ ರಾಜಕಾರಣ ನಡೆಸಿಕೊಂಡು ಬಂದಿದ್ದಾರೆ. ಗುಜರಾತ್ ಗಲಭೆ ನಿರ್ವಹಿಸಿಕೊಂಡು ಬಂದರು. ಬಹಳ ಪೈಪೋಟಿ ಇದ್ದರೂ ಸಂಪೂರ್ಣ ಬಹುಮತ ತಂದರು. ಎರಡನೇ ಬಾರಿ ಬಹುಮತ ಹೆಚ್ಚಿಸಿ ಎನ್‍ಡಿಎ ವಿಸ್ತಾರ ಮಾಡಿದ್ದಾರೆ. ಇದೆಲ್ಲ ನೋಡಿದಾಗ ರಾಜಕೀಯವಾಗಿ ಅವರು ಮುತ್ಸದ್ದಿತನ ಹೊಂದಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇಂಡಿ ಘಟಬಂಧನ್ ನೋಡಿದರೆ ಅಲ್ಲಿ ಯಾವುದೇ ಬೆಳವಣಿಗೆ ಇಲ್ಲ. ಕಾಂಗ್ರೆಸ್ ನಂಬಿಕೊಂಡು ಹೋಗುವ ಕೆಲಸ ನಿತೀಶ್ ಕುಮಾರ್ ಅಥವಾ ಚಂದ್ರ ಬಾಬು ನಾಯ್ಡು ಮಾಡುವುದಿಲ್ಲ. ಕಾಂಗ್ರೆಸ್ ಮಿತ್ರ ಪಕ್ಷಗಳ ಹೆಗಲ ಮೇಲೆ ಕೂತು ಕೆಲಸ ಮಾಡಿದೆ. ಅವರ ಸ್ವಂತ ಬಲದಿಂದ ಅಲ್ಲ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ 20 ಸ್ಥಾನ ಗೆಲ್ಲುವುದಾಗಿ ಹೇಳಿದ್ದರು. 9ಕ್ಕೆ ಬಂದು ನಿಂತಿದ್ದಾರೆ. ಡಿ.ಕೆ.ಸಹೋದರರು ಸೋತಿದ್ದಾರೆ. ಅವರಿಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.