ಡಿ.ಕೆ.ಶಿವಕುಮಾರ್ರ ಸಹನೆಯ ಕಟ್ಟೆ ಒಡೆಯುವ ಕಾಲ ಸನ್ನಿಹಿತ : ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭದ್ರತೆ, ಒಳ ಬೇಗುದಿ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಯಾವಾಗ ಒಡೆಯುತ್ತದೆ ಎನ್ನುವುದು ಪ್ರಶ್ನೆಯಾಗಿದ್ದು, ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, " ಡಿ.ಕೆ.ಶಿವಕುಮಾರ್ ಅವರು ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಹಳ ಸಹನೆ ಪ್ರದರ್ಶನ ಮಾಡುತ್ತಿದ್ದಾರೆ. ಅದು ಅವರ ಮುತ್ಸದ್ಧಿತನವೋ? ಹೈಕಮಾಂಡ್ ಸೂಚನೆಯೋ ನೋಡಬೇಕು. ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಯಾವಾಗ ಒಡೆಯುತ್ತದೆ ಅನ್ನುವುದು ಮುಖ್ಯವಾಗುತ್ತದೆ. ಪ್ರಕ್ರಿಯೆ ಆರಂಭವಾಗಿದ್ದು, ಕಾಲ ಯಾವಾಗ ಬರುತ್ತದೆ ಎಂದು ನೋಡಬೇಕು" ಎಂದು ಹೇಳಿದರು.
ಕಾಂಗ್ರೆಸ್ ಮೇಲಿನ ಕಮೀಷನ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼಈ ಸರಕಾರ ಎಲ್ಲದರಲ್ಲಿ ಕಮೀಷನ್, ಭ್ರಷ್ಟಾಚಾರ ನಡೆಸುತ್ತಿದೆ. ಇದರಿಂದ ಜನ ಹೈರಾಣಾಗಿದ್ದಾರೆ. ಅಬಕಾರಿ ಗುತ್ತಿಗೆದಾರರು, ಪಿಡಬ್ಲ್ಯುಡಿ, ನೀರಾವರಿ ಇಲಾಖೆಯ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಮಧ್ಯಮ ವರ್ಗದವರು ಹೈರಾಣಾಗಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಒಂದು ಸೈಟ್ ತೆಗೆದುಕೊಳ್ಳಲಾಗದ ವಾತಾವರಣವನ್ನು ಸರಕಾರ ನಿರ್ಮಾಣ ಮಾಡಿದೆʼ ಎಂದರು.
ಕಾಂಗ್ರೆಸ್ ದೆಹಲಿಯಲ್ಲಿ ಮಹಿಳೆಯರಿಗೆ ಪ್ಯಾರಿ ದೀದಿ ಯೋಜನೆ ಘೋಷಣೆ ಮಾಡಿರುವುದರಿಂದ ಅಲ್ಲಿನ ಜನರು ನಂಬುವುದಿಲ್ಲ. ಈಗಾಗಲೇ ಗ್ಯಾರೆಂಟಿ ಹೆಸರಿನಲ್ಲಿ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕವನ್ನು ದಿವಾಳಿ ಮಾಡಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ದೆಹಲಿಯನ್ನೂ ದಿವಾಳಿ ಮಾಡುತ್ತಾರೆ. ಹೀಗಾಗಿ ಜನರು ಕಾಂಗ್ರೆಸನ್ನು ನಂಬುವುದಿಲ್ಲ ಎಂದರು.
ಗೊಂದಲಕ್ಕೆ ತೆರೆ :
ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಿದೆ. ಈ ತಿಂಗಳಲ್ಲಿ ಸರಿ ಹೋಗಲಿದೆ. ಒಳ್ಳೆಯ ರೀತಿಯಲ್ಲಿ ಎಲ್ಲವೂ ಬಗೆಹರಿಯುವ ವಾತಾವರಣವನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿದರು.