ʼಅಸಭ್ಯವಾಗಿ ನಡೆದುಕೊಳ್ಳುವುದು ಬಿಜೆಪಿಯ ಅಸಲಿ ಸಂಸ್ಕೃತಿʼ; ಅರಣ್ಯಾಧಿಕಾರಿಗೆ ನಿಂದಿಸಿದ ಶಾಸಕ ಹರೀಶ್ ಪೂಂಜಾ ವೀಡಿಯೊ ಹಂಚಿಕೊಂಡ ಕಾಂಗ್ರೆಸ್
ಬೆಂಗಳೂರು: ʼʼಅವಾಚ್ಯ ಶಬ್ದಗಳನ್ನು ಬಳಸುತ್ತಾ, ಅಸಭ್ಯವಾಗಿ ನಡೆದುಕೊಳ್ಳುವುದು ಬಿಜೆಪಿಯ ಅಸಲಿ ಸಂಸ್ಕೃತಿʼʼ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ನಿರ್ಮಾಣ ಹಂತದ ಮನೆ ತೆರವಿಗೆ ಮುಂದಾದ ಅರಣ್ಯ ಇಲಾಖೆ ಅಧಿಕಾರಿಗೆ ಶಾಸಕ ಹರೀಶ್ ಪೂಂಜಾ ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೊವನ್ನು ಹಂಚಿಕೊಂಡಿರುವ ಕಾಂಗ್ರೆಸ್, ʼʼಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಿಜೆಪಿ ಶಾಸಕ ಹರೀಶ್ ಪೂಂಜಾ ಬೀದಿ ಪೋಕರಿಗಳಿಗಳಂತೆ ಅರಣ್ಯ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ʼʼಸಂಸ್ಕೃತಿ, ಸಂಪ್ರದಾಯ, ಪರಂಪರೆ ಎಂದು ದೊಡ್ಡ ದೊಡ್ಡ ಪದಗಳನ್ನು ಬಳಸುವ ಬಿಜೆಪಿಯ ಅಸಲಿ ಸಂಸ್ಕೃತಿ ಅವಾಚ್ಯ ಶಬ್ದಗಳನ್ನು ಬಳಸುತ್ತಾ, ಅಸಭ್ಯವಾಗಿ ನಡೆದುಕೊಳ್ಳುವುದುʼʼ ಎಂದು ಕಾಂಗ್ರೆಸ್ ಕಿಡಿಕಾರಿದೆ.
ʼʼಶಾಸಕನಾದವನಿಗೆ ಯಾವುದೇ ಸಮಸ್ಯೆಗಳಿಗೆ ಕಾನೂನಾತ್ಮಕ, ಸಂವಿಧಾನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲು ಅವಕಾಶವೂ ಇದೆ, ಅಧಿಕಾರವೂ ಇದೆ, ಆದರೆ ಪುಡಿ ರೌಡಿಗಳಂತೆ ಹೈಡ್ರಾಮ ಮಾಡುವುದು ಬಿಜೆಪಿಯವರ ರಕ್ತದಲ್ಲೇ ಬಂದಿರುವ ಗುಣ ಎನಿಸುತ್ತಿದೆʼʼ ಎಂದು ಕಾಂಗ್ರೆಸ್ ಟೀಕಿಸಿದೆ.