ಬೆಳಗಾವಿ: ಮಹಿಳೆ ಹತ್ಯೆ ಪ್ರಕರಣ; ಮೂರು ವರ್ಷಗಳ ಬಳಿಕ ಆರೋಪಿಗಳ ಬಂಧನ

ಮೃತ ಮಹಿಳೆ ಶಿವಲೀಲಾ ಮತ್ತು ಆರೋಪಿ ವಿಠ್ಠಲ ಬಂಗಿ
ಬೆಳಗಾವಿ: ಸವದತ್ತಿ ತಾಲೂಕಿನ ಹಿರೇಬುದುನೂರು ಗ್ರಾಮದಲ್ಲಿ ನಡೆದಂತಹ ಶಿವಲೀಲಾ ವಿಠ್ಠಲ್ ಬಂಗಿ (32) ಎಂಬ ಮಹಿಳೆಯೊಬ್ಬರ ಕೊಲೆ ಪ್ರಕರಣವನ್ನು 3 ವರ್ಷ 9 ತಿಂಗಳ ನಂತರ ಪೊಲೀಸರು ಬೇಧಿಸಿದ್ದಾರೆ.
ಆರೋಪಿಗಳನ್ನು ವಿಠ್ಠಲ್ ಲಕ್ಷಣ ಬಂಗಿ, ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಎಂದು ಗುರುತಿಸಲಾಗಿದೆ.
ಬ್ಯಾಲ್ಯದಲ್ಲೇ ಶಿವಲೀಲಾಳನ್ನು ಮದುವೆಯಾಗಿದ್ದ ವಿಠ್ಠಲ ಬಂಗಿ ಕ್ರಮೇಣ ಶಿವಲೀಲಾಳ ನಡೆತೆ ಸರಿಯಿಲ್ಲ ಎಂದು ಆರೋಪಿಸುತ್ತಿದ್ದ.
2020ರ ಜನವರಿಯಲ್ಲಿ ಶಿವಲೀಲಾಳ ಪತಿ ವಿಠ್ಠಲ ಬಂಗಿ ಹಾಗೂ ಆಕೆಯ ಇಬ್ಬರು ಸಹೋದರರಾದ ಲಕ್ಕಪ್ಪ ಕಂಬಳಿ, ಸಿದಗೊಂಡ ಕಂಬಳಿ ಮತ್ತು ಇನ್ನಿಬ್ಬರು ಸೇರಿ ಕೊಲೆ ಮಾಡಿ, ಸವದತ್ತಿ ತಾಲೂಕಿನ ಹಿರೇಬುದುನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಕಿದ್ದರು.
ಗ್ರಾಮಸ್ಥರಲ್ಲಿ ಶಿವಲೀಲಾ ಓಡಿಹೋಗಿದ್ದಾಗಿ ಆರೋಪಿಗಳು ತಿಳಿಸಿದ್ದರು. ಆದರೆ ಗ್ರಾಮಸ್ಥರ ಸಂಶಯ ಹೆಚ್ಚಾದಾಗ ಸ್ವತಃ ಆರೋಪಿಗಳೇ ಸ್ಥಳೀಯ ಠಾಣೆಗೆ ತೆರಳಿ ಶಿವಲೀಲಾ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು.
ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಶಿವಲೀಲಾಳ ಮೃತದೇಹದ ಕಳೇಬರ ದೊರಕಿದ್ದು ಅದನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಪೊಲೀಸರಿಗೆ ಎರಡು ಲಕ್ಷ ಹಣ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದ್ದ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಸಂಪೂರ್ಣ ಮಾಹಿತಿ ಬಯಲಿಗೆಳೆದಿದ್ದಾರೆ.
ಇನ್ನು ಚಾಣಾಕ್ಷತನದಿಂದ ಪ್ರಕರಣವನ್ನು ಭೇದಿಸಿದ ಮೂಡಲಗಿ ಪೊಲೀಸರಿಗೆ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಬಹುಮಾನ ಘೋಷಣೆ ಮಾಡಿದ್ದಾರೆ.