ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ | ವಿವರಣೆ ಕೇಳಿ ಕೇಂದ್ರ ಡ್ರಗ್ ಕಂಟ್ರೋಲ್ ಇಲಾಖೆಗೆ ಪತ್ರ ಬರೆದ ರಾಜ್ಯ ಸರಕಾರ
ಸಾಂದರ್ಭಿಕ ಚಿತ್ರ(Meta AI)
ಬೆಂಗಳೂರು : ಇತ್ತೀಚೆಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯಲ್ಲಿ ಐವಿ ರಿಂಗರ್ಸ್ ಲ್ಯಾಕ್ಟೇಟ್ ದ್ರಾವಣ ಅಸುರಕ್ಷಿತ ಎಂದು ಉಲ್ಲೇಖಿಸಲಾಗಿದ್ದು, ಸಂಪೂರ್ಣ ವಿವರಣೆ ಕೇಳಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಕೇಂದ್ರ ಡ್ರಗ್ ಕಂಟ್ರೋಲ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಾ ಅಂಶಗಳು ಕಂಡುಬಂದಿದೆ. ಹೀಗಾಗಿ ಐವಿ ರಿಂಗರ್ಸ್ ಲ್ಯಾಕ್ಟೇಟ್ ದ್ರಾವಣ ಅಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕಂಪನಿಯು ದ್ರವಾಣವನ್ನು ಬರೋಬ್ಬರಿ 192 ಬ್ಯಾಚ್ಗಳಲ್ಲಿ ಔಷಧಿ ಕಳಿಸಿತ್ತು. ಬಳಕೆ ಮಾಡುವುದಕ್ಕೆ ಶುರು ಮಾಡಿದ ಆರಂಭದಲ್ಲೇ ಐವಿ ರಿಂಗರ್ಸ್ ಲ್ಯಾಕ್ಟೇಟ್ ಬಗ್ಗೆ ಶಂಕೆ ಇತ್ತು. ಬಳಿಕ 22 ಬ್ಯಾಚ್ಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂಬ ವರದಿ ಹೊರಬಿದ್ದಿತ್ತು.
ಖುದ್ದು ರಾಜ್ಯದ ಡ್ರಗ್ ಕಂಟ್ರೋಲ್ ಐವಿ ರಿಂಗರ್ಸ್ ಲ್ಯಾಕ್ಟೇಟ್ ಗುಣಮಟ್ಟ ಉತ್ತಮವಾಗಿಲ್ಲ ಎಂಬ ವರದಿ ನೀಡಿತ್ತು. ಬಳಿಕ ಐವಿ ರಿಂಗರ್ಸ್ ಬಳಸಬೇಡಿ ಎಂದು ತಡೆಹಿಡಿದು, ಎಲ್ಲ ಆಸ್ಪತ್ರೆಗಳಿಗೂ ಸುತ್ತೋಲೆ ಹೊರಡಿಸಿತ್ತು. ಪಶ್ಚಿಮ ಬಂಗಾಳದಿಂದ ಬಂದಿದ್ದ ಅಷ್ಟು ಬ್ಯಾಚ್ಗಳಿಗೆ ತಡೆ ಹಾಕಿ, ಬ್ಲಾಕ್ ಲೀಸ್ಟ್ ಗೆ ಸೇರಿಸಿತ್ತು. ಆದರೆ, ಕೇಂದ್ರ ಡ್ರಗ್ ಲ್ಯಾಬ್ನಲ್ಲಿ ಇದೇ ಔಷಧಿಯ 22 ಬ್ಯಾಚ್ಗಳು ಪಾಸ್ ಆಗಿವೆ. ಹೀಗಾಗಿ ಪತ್ರ ಬರೆಯಲಾಗಿದೆ.
ಕೇಂದ್ರ ಡ್ರಗ್ ಲ್ಯಾಬ್ ನೀಡಿದ್ದ ಪಾಸಿಟಿವ್ ವರದಿಯನ್ನೇ ಪಶ್ಚಿಮ ಬಂಗಾಳದ ಕಂಪನಿಯು ರಾಜ್ಯದ ಔಷಧಿ ನಿಗಮದ ಮುಂದಿಟ್ಟಿತ್ತು. ನಿಯಮಗಳ ಪ್ರಕಾರ ಸೆಂಟ್ರಲ್ ಡ್ರಗ್ ಲ್ಯಾಬ್ನಲ್ಲಿ ವರದಿ ಅಂತಿಮಯಾಗಿದೆ. ಹೀಗಾಗಿ ಟೆಂಡರ್ ರೂಲ್ಸ್ ಪ್ರಕಾರ ಕಂಪನಿಯ ದ್ರಾವಣ ನಿರಾಕರಿಸುವಂತಿಲ್ಲ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿರುವ ಕೇಂದ್ರದ ಲ್ಯಾಬ್ಗೆ ಸ್ಯಾಂಪಲ್ಸ್ ರವಾನೆ ಮಾಡಲಾಗಿದ್ದು, ಆ ವರದಿ ಡಿ.9 ರಂದು ಬರಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.