ಬೇಲೂರು | ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಟಾಪಟಿ: ಕುರ್ಚಿಗಳಲ್ಲಿ ಬಡಿದಾಟ !
ಬೇಲೂರು, ಡಿ.9: ಮಾಜಿ ಸಚಿವ ಬಿ.ಶಿವರಾಂ ಮತ್ತು ಕಾಂಗ್ರೆಸ್ ಮುಖಂಡ ಜಿತ್ತೇನಹಳ್ಳಿ ರಾಮಚಂದ್ರ ನೇತೃತ್ವದಲ್ಲಿಂದು ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ಪರಸ್ಪರ ಕುರ್ಚಿಯನ್ನು ಎತ್ತಿಕೊಂಡು ಬಡಿದಾಡಿದ ಘಟನೆ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೇಲೂರು ಹೊರ ವಲಯದ ಭಾರತ್ ಕನ್ವೆನ್ಷನ್ ಹಾಲ್ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರತಿ ಮುಖಂಡರು ತಮ್ಮ ತಮ್ಮ ಅಭಿಪ್ರಾಯವನ್ನು ವೇದಿಕೆ ಮೇಲೆ ವ್ಯಕ್ತಪಡಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ನೆರ್ಲಿಗೆ ಸೋಮಣ್ಣ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಶಿವರಾಂ ಅಲ್ಪ ಅಂತರದಿಂದ ಪರಾಭವಗೊಳ್ಳಲು ಕಾರ್ಯಕರ್ತರು ಕಾರಣ ಎಂದರು. ಈ ಹೇಳಿಕೆಗೆ ಕಾಂಗ್ರೆಸ್ ಮುಖಂಡರಾದ ಧನ್ ಪಾಲ್, ಯಮಸಂದಿ ಪಾಪಣ್ಣ, ಮಲ್ಲೇಶ ಇನ್ನಿತರರು ತಮ್ಮ ಆಕ್ರೋಶ ವ್ಯಕ್ತಪಡಿಸಿದಲ್ಲದೆ ಮಾತಿನ ಸಮರಕ್ಕಿಳಿದರು.
ಈ ವೇಳೆ ಎಂ.ಆರ್.ವೆಂಕಟೇಶ, ಜಮಾಲ್ ಇನ್ನಿತರರು ಗೊಂದಲ ನಿವಾರಿಸಲು ಪ್ರಯತ್ನಿಸಿದರೂ ವಿಫಲವಾಯಿತು. ಸಭೆಯಲ್ಲಿ ಗೊಂದಲ ಹೆಚ್ಚಾಯಿತು. ಕೆಲ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮಾತಿನ ಜಟಾಪಟಿಯ ಮಧ್ಯೆ ಕೆಲವರು ಕುರ್ಚಿಯನ್ನು ಮೇಲೆತ್ತಿ ಬಡಿದಾಡಿಕೊಂಡ ಘಟನೆ ನಡೆಯಿತು.
ಕೆಲ ಕಿಡಿಗೇಡಿಗಳಿಂದ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ
ಈ ಬಗ್ಗೆ ಪುರಸಭಾ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ ಮಾತನಾಡಿ, ಇಂದಿನ ಸಭೆ ಹಾಸನ ಲೋಕಸಭಾ ಚುನಾವಣೆಗೆ ಯಾರು ಅಭ್ಯರ್ಥಿಯಾಗಬೇಕೆಂಬ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಕರೆದ ಸಭೆಯಲ್ಲಿ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿದ್ದಾರೆ. ಕಾರಣವಾಗಿದ್ದಾರೆ.ಅವರಿಗೆ ನಾವುಗಳು ತಕ್ಕ ಪಾಠ ಕಲಿಸಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿ.ಶಿವರಾಂ ಅಭ್ಯರ್ಥಿಯಾಗಲಿ ಎಂದ ಮಾತಿಗೆ ಪುರಸಭಾ ಮಾಜಿ ಸದಸ್ಯರಾದ ಜಿ.ಶಾಂತಕುಮಾರ್, ಸತೀಶ್, ನಾಗರಾಜು, ಶ್ರೀನಿವಾಸ್ ಒಮ್ಮತ ವ್ಯಕ್ತಪಡಿಸಿದರು. ಈ ವೇಳೆ ಯಮಸಂದಿ ಪಾಪಣ್ಣ ಮತ್ತು ವೈ.ಟಿ.ದಾಮೋದರ, ಕಾರ್ಯಕರ್ತರನ್ನು ಮರೆಯಬೇಡಿ ಎಂದು ಕಿವಿ ಮಾತು ಹೇಳಿದರು.
ಕಾಂಗ್ರೆಸ್ ಮುಖಂಡ ಜಿತ್ತೇನಹಳ್ಳಿ ರಾಮಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಬಿ.ಶಿವರಾಂ ಅವರ ಅವಿರತ ಶ್ರಮ ಹಾಗೂ ಸಂಘಟನೆ ಕಾಂಗ್ರೆಸ್ ಪಕ್ಷಕ್ಕೆ ಬೇಕಿದೆ. ನಾನು ಕೂಡ ಆಕಾಂಕ್ಷಿಯಾಗಿರುವೆ. ಅದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿ.ಶಿವರಾಂ ಸ್ಪರ್ಧೆ ನಡೆಸಿದರೆ ಖಚಿತವಾಗಿ ಗೆಲ್ಲುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶಿವರಾಂ, ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ, ಕೆ.ಪಿ.ಶೈಲೇಶ್, ಪುನೀತ್ ಗೌಡ, ಚಿಕ್ಕಬ್ಯಾಡಿಗೆರೆ ಮಂಜುನಾಥ, ಎಂ.ಜಿ.ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
.....................................
ವಿನಾ ಕಾರಣ ಗೊಂದಲ ಸೃಷ್ಟಿ: ಬಿ.ಶಿವರಾಂ
ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ಶಿವರಾಂ, ಕಳೆದ ಚುನಾವಣೆ ಸಂದರ್ಭ ಆಗಿರುವ ಲೋಪ ದೋಷದ ಬಗ್ಗೆ, ಮುಂದಿನ ಚುನಾವಣೆಯ ಗಮನದಲ್ಲಿಟ್ಟುಕೊಂಡು ಕರೆದ ಸಭೆಯಲ್ಲಿ ವಿನಾಕಾರಣ ಗೊಂದಲ ಸೃಷ್ಟಿಯಾಗಿದ್ದು, ದುರದೃಷ್ಟಕರ. ನಾನು ಕಾರ್ಯಕರ್ತರು ಮತ್ತು ಮುಖಂಡರನ್ನು ಏಕಾಭಿಪ್ರಾಯದಲ್ಲಿ ನೋಡುವೆ, ಈಗಾಗಲೇ ಬಿಜೆಪಿ- ಜೆಡಿಎಸ್ ಮೈತ್ರಿಯಾದ ಬಳಿಕ ರಾಜ್ಯದ 28 ಸ್ಥಾನ ನಾವೇ ಗೆಲ್ಲುತ್ತವೆ ಎನ್ನುವ ಹೊತ್ತಿನಲ್ಲಿ ಕಾಂಗ್ರೆಸ್ ಗುಂಪುಗಾರಿಕೆ ಎಷ್ಟರ ಮಟ್ಟಿಗೆ ಸರಿ? ಸದ್ಯ ಜಿತ್ತೇನಹಳ್ಳಿ ರಾಮಚಂದ್ರ ಕಾರ್ಯಕರ್ತರ ಅಭಿಪ್ರಾಯಕ್ಕೆ ಬಂದಿದ್ದಾರೆ. ನಾನೇನು ಅಭ್ಯರ್ಥಿಯಾಗಲು ಬಂದಿಲ್ಲ, ನಮಗೆ ಹಾಸನದಲ್ಲಿ ಎಂಪಿ ಸ್ಥಾನ ಗೆಲ್ಲುವುದಷ್ಟೇ ಮುಖ್ಯ ಎಂದರು.