ಬೆಂಗಳೂರು: 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ
ಹುಸಿ ಬಾಂಬ್ ಬೆದರಿಕೆ, ಆತಂಕ ಬೇಡ ಎಂದ ನಗರ ಪೊಲೀಸ್ ಆಯುಕ್ತರು
ಬೆಂಗಳೂರು, ಡಿ.1: ಬೆಂಗಳೂರಿನ ಬಸವೇಶ್ವರ ನಗರ, ಸದಾಶಿವ ನಗರ ಹಾಗೂ ಯಲಹಂಕದಲ್ಲಿನ 15 ಖಾಸಗಿ ಶಾಲೆಗಳಿಗೆ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ.
ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಆತಂಕಗೊಂಡ ಪೋಷಕರು ಶಾಲೆ ಬಳಿ ಓಡೋಡಿ ಬಂದು ತಮ್ಮ- ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಬಸವೇಶ್ವರ ನಗರದಲ್ಲಿ ನ್ಯಾಫಲ್ ಸ್ಕೂಲ್, ವಿದ್ಯಾಶಿಲ್ಪ ಸ್ಕೂಲ್ ಸಹಿತ 7 ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಮಿಕ್ಕಂತೆ ಸದಾಶಿವ ನಗರ, ಯಲಹಂಕ ಸೇರಿ ಹಲವು ಕಡೆಗಳಲ್ಲಿರುವ ಶಾಲೆಗೆ ಬೆದರಿಕೆ ಕರೆ ಬಂದಿವೆ ಎಂದು ತಿಳಿದುಬಂದಿದೆ.
ಹುಸಿ ಬಾಂಬ್ ಕರೆ: ಪೊಲೀಸ್ ಆಯುಕ್ತ
"ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಶಾಲೆಗಳಿಗೆ ಬಾಂಬ್ ಪತ್ತೆ ದಳ, ನಿಷ್ಕ್ರಿಯ ದಳವನ್ನು ಕಳುಹಿಸಲಾಗಿದೆ. ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.