ಬೆಂಗಳೂರು: ಸೆಲೂನ್ ವೊಂದರಲ್ಲಿ ʼಹೆಡ್ ಮಸಾಜ್ʼ ಮಾಡಿಸಿಕೊಂಡು ಪಾರ್ಶ್ವವಾಯುವಿಗೆ ತುತ್ತಾದ ಯುವಕ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸೆಲೂನ್ ವೊಂದರಲ್ಲಿ ಉಚಿತವಾಗಿ ʼಹೆಡ್ ಮಸಾಜ್ʼ ಮಾಡಿಸಿಕೊಂಡ ಯುವಕನೋರ್ವ ಪಾರ್ಶ್ವವಾಯುವಿಗೆ ತುತ್ತಾಗಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಬಳ್ಳಾರಿಯ ರಾಮ್ ಕುಮಾರ್ (ಹೆಸರು ಬದಲಿಸಲಾಗಿದೆ) ಎಂಬಾತನಿಗೆ ಕ್ಷೌರಿಕನೋರ್ವ ಹೆಡ್ ಮಸಾಜ್ ಮಾಡುವಾಗ ಕತ್ತನ್ನು ತಿರುಚಿದ್ದು, ಇದು ಯುವಕನಿಗೆ ಪಾರ್ಶವಾಯುವಿಗೆ ಒಳಗಾಗುವಂತೆ ಮಾಡಿದೆ.
ರಾಮ್ಕುಮಾರ್ಗೆ ಹೆಡ್ ಮಸಾಜ್ ಮಾಡುವಾಗ ತೀವ್ರವಾದ ನೋವುಂಟಾಗಿದೆ. ಆದರೆ ಅವರು ಮನೆಗೆ ವಾಪಾಸ್ಸಾಗಿದ್ದರು. ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ರವಿಕುಮಾರ್ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಬಳಿಕ ಎಡಭಾಗದಲ್ಲಿ ಬಲಹೀನತೆ ಉಂಟಾಗಿದೆ.
ರಾಮ್ ಕುಮಾರ್ ಗೆ ಅಸ್ವಸ್ಥತೆ ಹೆಚ್ಚಾಗುತ್ತಿದ್ದತೆ ಆಸ್ಪತ್ರೆಗೆ ತೆರಳಿದ್ದಾರೆ. ವೈದ್ಯರು ತಪಾಸಣೆ ಮಾಡಿ ಬಲವಂತದಿಂದ ಕತ್ತನ್ನು ತಿರುಗಿಸಿರುವ ಕಾರಣ ಅಪಧಮನಿಗಳ ಒಳ ಪದರಗಳು ಹರಿದು ಹೋಗಿ ಮೆದುಳಿಗೆ ರಕ್ತದ ಹರಿವು ಸ್ಥಗಿತಗೊಂಡಿದೆ ಮತ್ತು ಪಾರ್ಶ್ವವಾಯು ಅಥವಾ ಸ್ಟ್ರೋಕ್ ಗೆ ಕಾರಣವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಈ ಕುರಿತು ಆಸ್ಟರ್ ಆರ್ವಿ ಆಸ್ಪತ್ರೆಯ ನರವಿಜ್ಞಾನ ವಿಭಾಗದ ವೈದ್ಯರಾದ ಡಾ.ಶ್ರೀಕಾಂತ ಸ್ವಾಮಿ ಮಾತನಾಡಿದ್ದು, ರಾಮ್ ಕುಮಾರ್ ಅವರು ಸಾಮಾನ್ಯ ಸ್ಟ್ರೋಕ್ಗಿಂತ ಭಿನ್ನವಾದ ಡಿಸೆಕ್ಷನ್ ಗೆ ಸಂಬಂಧಿಸಿದ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಕತ್ತನ್ನು ತಿರುಗಿಸುವಾಗ ಅಪಧಮನಿಗಳ ಒಳ ಪದರಗಳು ಸೀಳಿದ ಕಾರಣ ರಕ್ತದ ಹರಿವು ಕಡಿತವಾಗಿ ಸ್ಟ್ರೋಕ್ ಉಂಟಾಗಿದೆ ಎಂದು ಹೇಳಿದ್ದಾರೆ.
ರಾಮ್ ಕುಮಾರ್ ಅವರಿಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಔಷಧಿಯನ್ನು ನೀಡಲಾಗಿದೆ. ಸೂಕ್ತ ಚಿಕಿತ್ಸೆ ಮೂಲಕ ಚೇತರಿಸಿಕೊಳ್ಳಲು ಅವರು ಸಂಪೂರ್ಣವಾಗಿ ಎರಡು ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ.
ಹಠಾತ್ ಮತ್ತು ಅಸಮರ್ಪಕವಾಗಿರುವ ಕುತ್ತಿಗೆಯ ಚಲನೆಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಪ್ರಕರಣದಲ್ಲಿ ಬಲವಂತವಾಗಿ ಕತ್ತನ್ನು ತಿರುಗಿಸಿರುವುದರಿಂದ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಸ್ಟ್ರೋಕ್ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕತ್ತಿನ ಸುತ್ತ ಹಠಾತ್ ಮತ್ತು ಬಲವಂತದಿಂದ ಚಲನೆ ಪಾರ್ಶ್ವವಾಯು ಉಂಟು ಮಾಡುತ್ತದೆ. ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಪ್ರಾಣ ಹಾನಿಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಕೃಪೆ: newindianexpress.com