ಬೆಂಗಳೂರು: ವ್ಯಾಪಾರಿಗೆ ನಕಲಿ ನೋಟು ನೀಡಿ ವಂಚಿಸಿದ್ದ ವಿಕಲಚೇತನ ಆರೋಪಿ ಸೆರೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಸ್ತೆ ಬದಿಯ ವ್ಯಾಪಾರಿಯೊಬ್ಬರಿಗೆ ನಕಲಿ 500 ರೂಪಾಯಿ ನೋಟು ನೀಡಿ ವಂಚಿಸಿದ್ದ 60 ವರ್ಷದ ದೈಹಿಕ ವಿಕಲಚೇತನ ವ್ಯಕ್ತಿಯನ್ನು ಇಲ್ಲಿನ ಆರ್.ಆರ್.ನಗರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಭದ್ರಾವತಿ ಮೂಲದ ಆರೋಪಿ ಕೋದಂಡಮೂರ್ತಿ ಎಂಬುವವರು ರಾಜರಾಜೇಶ್ವರಿನಗರದ ರಸ್ತೆ ಬದಿಯ ವ್ಯಾಪಾರಿಯೊಬ್ಬರಿಗೆ 500 ರೂಪಾಯಿ ನಕಲಿ ನೋಟು ನೀಡಿ 35 ರೂಪಾಯಿ ಮೌಲ್ಯದ ತರಕಾರಿ ಖರೀದಿಸಿದ್ದ, ಆರೋಪಿ ತೆರಳಿದ ಬಳಿಕ ವ್ಯಾಪಾರಗಾರನಿಗೆ ನೋಟು ನಕಲಿ ಎಂದು ತಿಳಿದುಬಂದಿದೆ.
ಈ ಕುರಿತು ವ್ಯಾಪಾರಿಯು ನಗರದ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಕೋದಂಡಮೂರ್ತಿಯನ್ನು ಬಂಧಿಸಿದ್ದು, ಆತನ ಬಳಿಯಿಂದ 500 ರೂಪಾಯಿಯ 30 ಸಾವಿರ ರೂ. ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ನೋಟುಗಳನ್ನು ಅವುಗಳ ಸತ್ಯಾಸತ್ಯತೆಯ ಶೇಕಡಾವಾರು ಪ್ರಮಾಣವನ್ನು ನಿರ್ಧರಿಸಲು ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಕೋದಂಡಮೂರ್ತಿ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರ್. ಆರ್.ನಗರ ಪೊಲೀಸರು ಆರೋಪಿಯನ್ನು 10 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಡೀಲರ್ ಗಳು, ಚಿಲ್ಲರೆ ವ್ಯಾಪಾರಿಗಳು, ಪೂರೈಕೆದಾರರು ಮತ್ತು ವಿನಿಮಯದಲ್ಲಿ ಭಾಗಿಯಾಗಿರುವ ಆರೋಪಿಗಳ ಜೊತೆಗೆ ನಕಲಿ ನೋಟು ಉತ್ಪಾದನೆಯಲ್ಲಿ ಕೋದಂಡಮೂರ್ತಿ ಭಾಗಿಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.