ಬೆಂಗಳೂರು: ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು: ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ದೇಶದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದ್ದು ಕೂಡಲೇ ಅವರನ್ನು ಬಂಧಿಸಿ ದೇಶದ್ರೋಹದ ಪ್ರಕರಣದ ಅಡಿಯಲ್ಲಿ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಅನಂತ್ ಕುಮಾರ್ ಹೆಗಡೆ ಭಾವಚಿತ್ರವನ್ನು ದಹಿಸಿ ನಗರದ ಆನಂದರಾವ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಜೆಪಿ, ಆರೆಸ್ಸೆಸ್ ಭಾರತದ ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿದೆ ದೇಶದ ಪವಿತ್ರ ಸಂವಿಧಾನದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ ಎಂಬುದು ಅವರ ನಡವಳಿಕೆ ಹಾಗೂ ಆಡಳಿತದಿಂದ ಈಗಾಗಲೇ ಸಾಬೀತಾಗಿದೆ. ಚುನಾವಣೆ ಬಾಂಡ್ ಹೆಸರಿನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡದೆ ಎಸ್ಬಿಐ ಮೂಲಕ ರಾಜಕೀಯ ಲಾಭ ಪಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಹತ್ತು ವರ್ಷಗಳ ದುರಾಡಳಿತ ದೇಶದ ಪ್ರತಿಯೊಬ್ಬ ಪ್ರಜೆಗೂ ಇಂದು ತಿಳಿಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಆಡಳಿತದಿಂದ ಇಂದು ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ದೇಶದ ಸಂವಿಧಾನವನ್ನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಅನಂತಕುಮಾರ್ ಹೆಗಡೆ ಒಬ್ಬ ದೇಶದ್ರೋಹಿ. ಈ ದೇಶದ್ರೋಹಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಂವಿಧಾನದ ಬಗ್ಗೆ ಗೌರವವಿದ್ದರೆ ಪ್ರಧಾನಿ ನರೇಂದ್ರ ಮೋದಿ ಕೂಡಲೇ ದೇಶದ ಜನರ ಕ್ಷಮೆ ಕೋರಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಅಧ್ಯಕ್ಷರಾದ ಎಸ್ ಮನೋಹರ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ. ಆನಂದ, ಪ್ರಕಾಶ್, ಹೇಮರಾಜು, ಜಯಸಿಂಹ, ರಾಮಕೃಷ್ಣ, ಬಾಲಕೃಷ್ಣ, ಚೇತನ್, ಉಮೇಶ್, ಚಂದ್ರಶೇಖರ್, ಕೆ.ಟಿ ನವೀನ್, ಮುನಿರಾಜು, ರಂಜಿತ್ ರವಿ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.