ಬೆಂಗಳೂರು: ಮನೆಗಳ್ಳತನ ಪ್ರಕರಣದಲ್ಲಿ ಕಾನ್ಸ್ಟೆಬಲ್ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.17: ಬೆಳಗ್ಗೆ ಪೊಲೀಸ್ ಸಿಬ್ಬಂದಿ ಆಗಿ ಕಾರ್ಯ ನಿರ್ವಹಿಸಿ, ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳೊಂದಿಗೆ ಸೇರಿ ಬೆಂಬಲಿಸುತ್ತಿದ್ದ ಆರೋಪದಡಿ ಪೊಲೀಸ್ ಕಾನ್ಸ್ಟೆಬಲ್ ನೋರ್ವನನ್ನು ಇಲ್ಲಿನ ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಏರ್ಪೋರ್ಟ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಲ್ಲಪ್ಪ ಬಂಧಿತ ಪೊಲೀಸ್ ಕಾನ್ಸ್ಟೆಬಲ್ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಬನಶಂಕರಿ ಠಾಣೆಂ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಲ್ಲಪ್ಪ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆನಂತರ, ಪ್ರಾಥಮಿಕ ಹಂತದಲ್ಲಿ ಯಲಪ್ಪನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿದ್ದರಿಂದ ಆತನನ್ನ ಅಮಾನತುಗೊಳಿಸಿ, ತನಿಖೆಗೆ ಆದೇಶ ನೀಡಲಾಗಿತ್ತು. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಪ್ಪನ ವಿರುದ್ಧ ಚಾರ್ಜ್ಶೀಟ್ ಸಹ ಸಲ್ಲಿಕೆಯಾಗಿತ್ತು.
ಆದರೆ ಪುನಃ ಯಲ್ಲಪ್ಪ, ಜ್ಞಾನಭಾರತಿ, ಚಂದ್ರಾ ಲೇಔಟ್ ಹಾಗೂ ಚಿಕ್ಕಜಾಲ ವ್ಯಾಪ್ತಿಯಲ್ಲಿಯೂ ಮನೆಗಳ್ಳರಿಗೆ ಬೆಂಬಲಿಸಿ ಸಹಾಯ ಮಾಡಿರುವುದು ಬಯಲಾಗಿದೆ. ಈ ಸಂಬಂಧ ಆರೋಪಿಯ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ಜ್ಞಾನಭಾರತಿ ಠಾಣಾ ಪೊಲೀಸರು ತಿಳಿಸಿದ್ದಾರೆ.