ಬೆಂಗಳೂರು: ಮತ್ತೋರ್ವ ಬಿಲ್ಡರ್ ನಿವಾಸದ ಮೇಲೆ ಐಟಿ ದಾಳಿ

ಬೆಂಗಳೂರು, ಅ.15: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿರುವ ಸಂತೋಷ್ ಎಂಬುವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡರು.
ರವಿವಾರ ಇಲ್ಲಿನ ರಾಜಾಜಿನಗರದ ಕೇತಮಾರನಹಳ್ಳಿ ಅಪಾರ್ಟ್‍ಮೆಂಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸತತ ಎಂಟು ಗಂಟೆಗಳ ಕಾಲ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ಕೈಗೊಂಡರು. ಈ ವೇಳೆ ಹಣ ಪತ್ತೆಯಾಗಿದ್ದು ದಾಖಲೆ ಒದಗಿಸುವಂತೆ ಸೂಚಿಸಿ ನೋಟಿಸ್‍ವೊಂದನ್ನು ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ, ಮನೆಯಲ್ಲಿದ್ದ ವಿವಿಧ ವಸ್ತುಗಳು, ಕೆಲ ಆಸ್ತಿ ದಾಖಲೆ ಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಚಾರಣೆಗೂ ಹಾಜರಾಗಬೇಕೆಂದು ಸಂತೋಷ್ ಅವರಿಗೆ ಸೂಚಿಸಲಾಗಿದೆ.
45 ಕೋಟಿ ಜಪ್ತಿ?: ಸಂತೋಷ್ ನಿವಾಸದ ಮೇಲೆ ದಾಳಿ ನಡೆಸಿದಾಗ 45 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ, ತಮ್ಮ ಬಳಿ ಪತ್ತೆಯಾದ ಹಣದ ಕುರಿತು ಬಿಲ್ಡರ್ ಅನ್ನು ವಿಚಾರಣೆ ನಡೆಸಿದಾಗ ಅವರು ಮಾಜಿ ವಿಧಾನ ಪರಿಷತ್ತಿನ ಸದಸ್ಯರೊಬ್ಬರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ಪತ್ತೆಯಾದ ಹಣದ ಮೂಲ ಕಂಡು ಹಿಡಿಯಲು ಮಾಜಿ ಎಂಎಲ್‍ಸಿ ಸಹೋದರರನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.