ಬೆಂಗಳೂರು ತೊರೆಯುವ ಉದ್ಯಮಿಯಿಂದ ಭಾವನಾತ್ಮಕ ವಿದಾಯ ಸಂದೇಶ
ʼಬೆಂಗಳೂರು ನನ್ನ ಜೀವನದಲ್ಲಿ ನನಗೆ ಎಲ್ಲಾ ಒಳ್ಳೆಯ ವಿಷಯಗಳನ್ನು ನೀಡಿದೆʼ
ಸಾಂದರ್ಭಿಕ ಚಿತ್ರ PC : PTI
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 14 ವರ್ಷಗಳಿಂದ ನೆಲೆಸಿದ್ದ ಉದ್ಯಮಿಯೊಬ್ಬರು ಭಾವನಾತ್ಮಕ ವಿದಾಯ ಸಂದೇಶವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.
ಉಡುಪುಗಳ ಬ್ರಾಂಡ್ ಝೈಮ್ರಾಟ್ನ ಸಹ-ಸಂಸ್ಥಾಪಕ ಆಸ್ಥಾನ ಉಜ್ಜವಲ್ ಅವರು ತಮ್ಮ ಉದ್ಯಮದ ನಿಮಿತ್ತ ಬೆಂಗಳೂರಿನಿಂದ ಪುಣೆಗೆ ತಮ್ಮ ವಾಸವನ್ನು ಬದಲಿಸುತ್ತಿದ್ದು, ಈ ವೇಳೆ ಬೆಂಗಳೂರು ತನಗೆ ನೀಡಿರುವ ಕೊಡುಗೆಗಳ ಬಗ್ಗೆ, ಬೆಂಗಳೂರಿನ ವಿಶೇಷತೆಗಳ ಬಗ್ಗೆ ತಮ್ಮ ವಿದಾಯ ಸಂದೇಶದಲ್ಲಿ ಹೇಳಿದ್ದಾರೆ. ಈ ಸಂದೇಶ ವೈರಲ್ ಆಗಿದೆ.
“ತನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ರೂಪಿಸಿದ ಕೀರ್ತಿ ಬೆಂಗಳೂರಿಗೆ ಸಲ್ಲುತ್ತದೆ. ನಗರವು ತನಗೆ ಎಲ್ಲಾ ಒಳ್ಳೆಯದನ್ನು ನೀಡಿದೆ. ತನ್ನ ಮೊದಲ ಕೆಲಸದಿಂದ ತನ್ನ ಜೀವನ ಸಂಗಾತಿ ಮತ್ತು ಎರಡು ಯಶಸ್ವಿ ಸ್ಟಾರ್ಟ್ಅಪ್ಗಳಿಗೆ ಬೆಂಗಳೂರು ಕಾರಣವಾಗಿದೆ” ಎಂದು ಉಜ್ಜವಲ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
“ನಾನು ಬೆಂಗಳೂರಿನಿಂದ ಪುಣೆಗೆ ಹೋಗುತ್ತಿದ್ದೇನೆ. ಬೆಂಗಳೂರು 14 ವರ್ಷಗಳಿಂದಲೂ ನನ್ನ ನಿವಾಸವಾಗಿದೆ. ನಗರವು ನನ್ನ ಜೀವನದಲ್ಲಿ ನನಗೆ ಎಲ್ಲಾ ಒಳ್ಳೆಯ ವಿಷಯಗಳನ್ನು ನೀಡಿದೆ - ಮೊದಲ ಕೆಲಸ, ಮೊದಲ ವಿದೇಶಿ ಪ್ರವಾಸ, ಜೀವನ ಸಂಗಾತಿ, 2 ಯಶಸ್ವಿ ವ್ಯವಹಾರಗಳು, ಹಣಕಾಸು, ಆರಂಭಿಕ ಸ್ವಾಧೀನ, ಉತ್ತಮ ಸ್ನೇಹಿತರು ಮತ್ತು ಇನ್ನಷ್ಟನ್ನು ನಗರವು ನೀಡಿದೆ”.
“ನಾನು ಸ್ಥಳೀಯನಲ್ಲ, ಆದರೂ ನಾನು ಹೊರಗಿನವನು ಎಂಬಂತೆ ಅನಿಸಿದ ದಿನವಿರಲಿಲ್ಲ. ನಾನು ನಗರ ಜೀವನದಲ್ಲಿ ಹೆಚ್ಚು ಕಾಲ ಬಿಎಂಟಿಸಿ, ಆಟೋ, ಕ್ಯಾಬ್ ಮೂಲಕ ಓಡಾಡಿದ್ದೇನೆ. ಬೆಂಗಳೂರು ಕೇವಲ ನಗರವಲ್ಲ, ಪದಗಳಲ್ಲಿ ವಿವರಿಸಲು ಕಷ್ಟವಾದ ಸುಂದರ ಅನುಭವ. ನೀವು ಇಲ್ಲಿನ ಜನರೊಂದಿಗೆ ವಾಸಿಸುವ ಮತ್ತು ಜಯನಗರದ ಓಣಿಗಳಲ್ಲಿ ಒಮ್ಮೆ ನಡೆದಾಡುವ ಅನುಭವವನ್ನು ಅನುಭವಿಸಿಯೇ ತೀರಬೇಕು. ನಾನು ಪುಣೆಯನ್ನು ನನ್ನ ಹೊಸ ಮನೆಯನ್ನಾಗಿ ಮಾಡಲು ಹೊರಟಿದ್ದೇನೆ. ಅಲ್ಲಿಗೆ ನನ್ನ ಪ್ರಯಾಣವನ್ನು ಪ್ರಾರಂಭಿಸಲು ಕಾತುರನಾಗಿದ್ದೇನೆ” ಎಂದು ಬರೆದಿದ್ದಾರೆ.
ಬೆಂಗಳೂರಿನಲ್ಲಿ ಹೊರಗಿನವರನ್ನು ಪರಕೀಯರಂತೆ ನಡೆಸಲಾಗುತ್ತದೆ, ಭಾಷಾ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬಂತಹ ಅಪವಾದಗಳು ಇತ್ತೀಚೆಗೆ ಕೇಳಿ ಬರುತ್ತಿರುವುದರ ನಡುವೆಯೇ, ಉದ್ಯಮಿಯೊಬ್ಬರು ಬೆಂಗಳೂರಿನ ಕುರಿತು ಸಕರಾತ್ಮಕವಾಗಿ ಬರೆದಿರುವ ಟಿಪ್ಪಣಿಯು ಸಾಕಷ್ಟು ಗಮನ ಸೆಳೆದಿದೆ.
Personal note: I am leaving Bangalore for Pune.Bangalore has been home for 14+ years. The city has given me all the good things in my life - first job, first foreign trip, a life partner, 2 successful businesses, funding, startup acquisition, great friends, a network worth in…
— ujjawal (@ujjawalasthana) November 24, 2024