ಬೆಂಗಳೂರು | ಟೆಕ್ಕಿ ಆತ್ಮಹತ್ಯೆ ಪ್ರಕರಣ: ಪತ್ನಿ ಸಹಿತ ಮೂವರ ಬಂಧನ
ಬೆಂಗಳೂರು : ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ನಿಖಿತಾ, ಅತ್ತೆ ನಿಶಾ ಸೇರಿದಂತೆ ಮೂವರನ್ನು ಹರಿಯಾಣದ ಗುರುಗ್ರಾಮದಲ್ಲಿ ಮಾರತ್ತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅತುಲ್ ಸುಭಾಷ್ ಆತ್ಮಹತ್ಯೆ ಬೆನ್ನಲ್ಲೇ ಪತಿಯ ಕುಟುಂಬಸ್ಥರು ಬೆಂಗಳೂರಿನಿಂದ ನಾಪತ್ತೆಯಾಗಿದ್ದರು. ಈ ಕುರಿತು ಕಾರ್ಯಾಚರಣೆ ನಡೆಸಿದ ಮಾರತ್ತಹಳ್ಳಿ ಠಾಣೆಯ ವಿಶೇಷ ತಂಡ, ಪತ್ನಿ ನಿಖಿತಾ ಅನ್ನು ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಿದರೆ, ಅತ್ತೆ ನಿಶಾ ಬಾಮೈದ ಅನುರಾಗ್ ಸಿಂಘಾನಿಯಾ ಇಬ್ಬರನ್ನು ಉತ್ತರ ಪ್ರದೇಶದ ಅಲಹಬಾದ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.
ರವಿವಾರ ಮೂವರನ್ನು ಬೆಂಗಳೂರಿಗೆ ಕರೆತಂದಿರುವ ಮಾರತಹಳ್ಳಿ ಪೊಲೀಸರು, ಆರೋಪಿಗಳನ್ನು ನಗರದ 29ನೆ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆನಂತರ, ನ್ಯಾಯಾಲಯ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಾರತ್ಹಳ್ಳಿ ಠಾಣೆ ಪೊಲೀಸರು ಉತ್ತರ ಪ್ರದೇಶದ ಜೋನಪುರದಲ್ಲಿರುವ ಪತ್ನಿ ನಿಖಿತಾ ಸಿಂಘಾನಿಯಾ ಮನೆ ಬಾಗಿಲಿಗೆ ಡಿಸೆಂಬರ್ 13ರಂದು ಸಮನ್ಸ್ ಅಂಟಿಸಿ, ಮೂರು ದಿನದೊಳಗಾಗಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಇದರ ಬೆನ್ನಲ್ಲೇ ಪತ್ನಿ ನಿಖಿತಾ ಹಾಗೂ ತಾಯಿ ನಿಶಾ, ಸಹೋದರ ಅನುರಾಗ್, ಚಿಕ್ಕಪ್ಪ ಸುಶೀಲ್ ಅಲಹಾಬಾದ್ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ನಡುವೆ ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
34 ವರ್ಷದ ಅತುಲ್ ಮಾರತ್ತಹಳ್ಳಿ ವ್ಯಾಪ್ತಿಯಲ್ಲಿರುವ ಖಾಸಗಿ ಕಂಪೆನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಆಕೆ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಡಿಸೆಂಬರ್ 9ರಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಘಟನೆ ದೇಶದ್ಯಾಂತ ತೀವ್ರ ಚರ್ಚೆ ಹುಟ್ಟುಹಾಕಿತ್ತು.