ಚುನಾವಣಾ ಪ್ರಚಾರಕ್ಕೆ ಹೋದ ಪಿ.ಸಿ. ಮೋಹನ್ಗೆ ಮಹಿಳೆಯಿಂದ ಪ್ರಶ್ನೆಗಳ ಸುರಿಮಳೆ: ತಬ್ಬಿಬ್ಬಾದ ಬಿಜೆಪಿ ಸಂಸದ
ವಿಡಿಯೋ ವೈರಲ್
Screengrab:X/@vijaythottathil
ಬೆಂಗಳೂರು: ಚುನಾವಣಾ ಪ್ರಚಾರದ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಹಗರಣದಲ್ಲಿ ಹಣ ಕಳೆದುಕೊಂಡ ಠೇವಣಿದಾರರ ಪ್ರಶ್ನೆಗಳಿಂದ ತಪ್ಪಿಸಿ ನಿರ್ಗಮಿಸಿದ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಬಿಜೆಪಿಯ ಮತ್ತೋರ್ವ ಸಂಸದ ಪಿಸಿ ಮೋಹನ್ ಅವರು ಇಂತಹದ್ದೇ ಸಂದರ್ಭವನ್ನು ಎದುರಿಸಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ ಮೋಹನ್ ಅವರು ಹಲಸೂರು ಲೇಕ್ ಬಳಿ ಬೆಳಿಗ್ಗೆ ವಾಕಿಂಗ್ ಹೋಗುತ್ತಿರುವವರ ಬಳಿ ಮತಯಾಚನೆ ನಡೆಸಲು ಬಂದಿದ್ದು, ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಪಿಸಿ ಮೋಹನ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಮಹಿಳೆಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ತಡವರಿಸಿದ ಪಿಸಿ ಮೋಹನ್, ಕೊನೆಗೆ ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಕಂಡು ಸ್ಥಳದಿಂದ ನಿರ್ಗಮಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಸಂಸದ ಪಿಸಿ ಮೋಹನ್ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಕೋವಿಡ್ ಸಂದರ್ಭದಲ್ಲಿ ಜನರ ಸಂಪರ್ಕಕ್ಕೆ ಸಿಕ್ಕಿಲ್ಲ, ತಾವು ಮಾಡದ ಕೆಲಸಕ್ಕೆ ಪ್ರಚಾರ ಮಾಡುತ್ತಿದ್ದಾರೆ ಎಂದು ವಿಡಿಯೋ ಮಾಡಿ ಆರೋಪಿಸಿದ್ದಾರೆ.
ಈ ವಿಡಿಯೋ ವ್ಯಾಪಕ್ ವೈರಲ್ ಆಗಿದ್ದು, ಕೆಲಸ ಮಾಡಿಲ್ಲ ಎಂದು ಸಂಸದರನ್ನು ಕೇಳಬಾರದು. ಮೋದಿ ಅವರನ್ನು ಕೇಳಬೇಕು. ಯಾಕೆಂದರೆ, ಎಲ್ಲಾ ಕೆಲಸವನ್ನು ಮಾಡುವುದು ಪ್ರಧಾನಿ ಮೋದಿ ಮಾತ್ರ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.